ಭಾರತದಲ್ಲಿ ಸ್ತ್ರೀಗೆ ವಿಶೇಷ ಸ್ಥಾನಮಾನ

ಅರಸೀಕೆರೆ, ಏ. ೩- ವಿಶ್ವದಲ್ಲಿ ಭರತ ಖಂಡ ಮಾತ್ರ ಮಹಿಳೆಗೆ ವಿಶೇಷ ಸ್ಥಾನಮಾನ ನೀಡಿದೆ. ಹೆಣ್ಣು ಮನಸ್ಸು ಮಾಡಿದರೆ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ವಿಶ್ವಕ್ಕೆ ಆರೋಗ್ಯಕರವಾದ ಸಂದೇಶ ನೀಡುವುದರ ಮೂಲಕ ತನ್ನ ಕೊಡುಗೆಯನ್ನು ನೀಡಬಲ್ಲಳು. ಅದಕ್ಕೆ ಸಾಕಷ್ಟು ಅವಕಾಶಗಳು ಕೂಡ ನಿರ್ಮಾಣವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧೀಕಾರಿ ಮೋಹನ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಹಿಂದೆ ಭಾರತದಲ್ಲಿ ಮಹಿಳೆಗೆ ರಕ್ಷಣೆಯಿಲ್ಲದಂತಹ ವಾತಾವರಣವಿತ್ತು. ಆಕೆ ತನ್ನ ಪತಿ ನಿಧನವಾದಾಗ ಭವಿಷ್ಯದಲ್ಲಿ ಸಾಮಾಜಿಕವಾಗಿ ಸೂಕ್ತ ಭದ್ರತೆ, ರಕ್ಷಣೆ ಇಲ್ಲದಂತಾಗಿ ಪತಿಯ ಪಾರ್ಥೀವ ಶರೀರವಿದ್ದ ಆಗ್ನಿ ಚಿತೆಯ ಮೇಲೆ ತಾನು ಹಾರಿ ಪ್ರಾಣವನ್ನು ಬಿಡುತ್ತಿದ್ದಳು ಎಂಬ ಮಾಹಿತಿಯನ್ನು ಇತಿಹಾಸ ತಿಳಿಸುತ್ತದೆ. ಸ್ವಾತಂತ್ರ್ಯ ನಂತರೂ ಇದ್ದಂತಹ ಇಂತಹ ಸತಿ ಸಹಗಮನ ಎಂಬ ಪಿಡುಗನ್ನು ನಿಷೇಧಿಸುವುದರ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನಗಳು ನಡೆಯುತ್ತಾ ಬಂದಿದೆ ಎಂದರು.
ಉಪನ್ಯಾಸಕಿ ಕೋಮಲ ಮಾತನಾಡಿ, ದಿನನಿತ್ಯದ ನೈಜತೆಯನ್ನು ಅವಲೋಕಿಸದಾಗ ನಮ್ಮ ನಿಮ್ಮ ನಡುವೆ ನಡೆಯುವ ವಿದ್ಯಾಮಾನಗಳು ನೈಜತೆಯೊಂದಿಗೆ ಚರ್ಚೆಗಳಾಗಬೇಕು. ಇತಿಹಾಸಗಳನ್ನು ನಾವು ಕೆಣಕುತ್ತಾ ಹೋದಂತೆ ನಾವು ವಾಸ್ತವಾಂಶವನ್ನು ಮರೆಮಾಚಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂಬ ಕಾರ್ಯಕ್ರಮಗಳಲ್ಲಿ ನೈಜತೆಯೊಂದಿಗೆ ಆತ್ಮವಲೋಕನ ಮಾಡಿಕೊಳ್ಳುವ ಪ್ರಯತ್ನಗಳು ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಅರಕ್ಷಕ ಇಲಾಖೆಯ ಶುಭಾ, ಆರೋಗ್ಯ ಇಲಾಖೆಯ ಡಾ.ರಂಜಿನಿ, ನಗರಸಭೆ ಆರೋಗ್ಯ ನಿರೀಕ್ಷಕಿ ಜ್ಯೋತಿ, ಚೆಸ್ಕಾಂನ ಪದ್ಮಲತಾ, ಕೊರೊನಾ ವಾರಿಯರ್ಸ್‌ಗಳಾದ ಕವಿತಾ, ಶಿಕ್ಷಣ ಇಲಾಖೆಯ ಸುಧ ಯಾದಾಪುರ, ಗುಣವತಿ, ಮಹಿಳಾ ಮತ್ತು ಮಕ್ಕಳ ಇಲಾಖೆಯ ರೇಣುಕಮ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಲತಾ ಮಳ್ಳೂರ, ಪ್ರಧಾನ ಕಾರ್ಯದರ್ಶಿ ಜ್ಯೋತಿ, ಜಿಲ್ಲಾಧ್ಯಕ್ಷೆ ಆಶಾ, ತಾ.ಘಟಕದ ಅಧ್ಯಕ್ಷೆ ಎಂ.ವಿ ಕುಸುಮ, ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ಕೋಶಾಧ್ಯಕ್ಷೆ ಕಾತ್ಯಾಯಿನಿ ತೇವರಿಮಠ್, ವಿಜಯಲಕ್ಷ್ಮಿ ಕೊಳಗುಂದ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.