ಭಾರತದಲ್ಲಿ ಕೊರೊನಾ ಭಯಾನಕ ವಿವೇಕ್‌ಮೂರ್ತಿ ಕಳವಳ

ವಾಷಿಂಗ್ಟನ್,ಏ.೨೯- ಭಾರತದಲ್ಲಿ ದಾಖಲಾಗುತ್ತಿರುವ ಕೋವಿಡ್ ಸಾಂಕ್ರಾಮಿಕ ಪಿಡುಗು ಅತ್ಯಂತ ಭಯಾನಕವಾಗಿದೆ ಎಂದು ಅಮೆರಿಕದ ಸರ್ಜನ್ ಜನರಲ್ ಆಗಿರುವ ಭಾರತ ಮೂಲದ ವಿವೇಕ್‌ಮೂರ್ತಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
೨ನೇ ಬಾರಿಗೆ ಅಮೆರಿಕದಲ್ಲಿ ದೇಶದ ವೈದ್ಯಕೀಯ ಸೇವೆಯ ಉನ್ನತ ಹುದ್ದೆ ಅಲಂಕರಿಸಿರುವ ಅವರು, ಕೊರೊನಾದಿಂದಾಗಿ ತಮ್ಮ ಕುಟುಂಬದ ೭ ಮಂದಿಯನ್ನು ಕಳೆದುಕೊಂಡಿದ್ದಾರೆ.
ಸೋಂಕು ಹೆಚ್ಚಿರುವ ಭಾರತದಲ್ಲಿ ಇರುವ ಕುಟುಂಬ ಸದಸ್ಯರೊಂದಿಗೆ ಪ್ರತಿನಿತ್ಯ ಮಾತನಾಡುತ್ತಿದ್ದೇನೆ. ಅವರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ದಯನೀಯ ಪರಿಸ್ಥಿತಿ ಇನ್ನೆಂದೂ ಬಾರದಿರಲಿ ಎಂದು ಪ್ರಾರ್ಥಿಸಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದರು.
ಪ್ರತಿ ನಿತ್ಯ ದೇಶದಲ್ಲಿ ೩.೫ ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲುತ್ತಿದ್ದು, ಆಸ್ಪತ್ರೆಗಳು ರೋಗಿಗಳಿಂದ ಭರ್ತಿಯಾಗುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರವಾಗಿ ಅಸ್ವಸ್ಥವಾದವರಿಗೆ ಆಮ್ಲಜನಕ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕ ಭಾರತಕ್ಕೆ ನೆರವು ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ ಎಂದು ಅವರು ಹೇಳಿದರು.