ಭಾರತದಲ್ಲಿನ ಬಿಕ್ಕಟ್ಟುಗಳಿಗೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೇ ಪರಿಹಾರ: ಕೆ. ರಾಧಾಕೃಷ್ಣ

ಕಲಬುರಗಿ,ಜು 16: ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಬಿಕ್ಕಟ್ಟಿಗೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೇ ಪರಿಹಾರವಾಗಿದೆ ಎಂದು ಎಸ್‍ಯುಸಿಐ(ಸಿ) ಪಾಲಿಟ್ ಬ್ಯೂರೋ ಸದಸ್ಯ ಕಾ. ಕೆ. ರಾಧಾಕೃಷ್ಣ ಅವರು ಪ್ರತಿಪಾದಿಸಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಭಾನುವಾರ ಅಪ್ರತಿಮ ಮಾಕ್ರ್ಸ್‍ವಾದಿ ಚಿಂತಕರು, ತತ್ವಜ್ಞಾನಿಗಳು ಹಾಗೂ ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಕಾ. ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವದ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ದೇಶವು ಸ್ವಾತಂತ್ರ್ಯಗೊಂಡು 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ, ಬಡತನ, ಮಹಿಳೆಯರ ಮೇಲಿನ ಅತ್ಯಾಚಾರಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ದಿನನಿತ್ಯ ಅವಶ್ಯಕ ವಸ್ತುಗಳ ಬೆಲೆಗಳು ಗಗನಮುಖಿಯಾಗುತ್ತಿವೆ.. ಸ್ವಾತಂತ್ರ್ಯದ ನಂತರ ಆಳ್ವಿಕೆ ನಡೆಸಿರುವ ಕಾಂಗ್ರೆಸ್, ಜನತಾಪಕ್ಷ, ಬಿಜೆಪಿ ಹಾಗೂ ಇತರ ಪಕ್ಷಗಳು ದೇಶದ ಬಂಡವಾಳಶಾಹಿಗಳ ಸೇವೆಯನ್ನು ಮಾಡಿ ಅವರ ಸಂಪತ್ತನ್ನು ಲಕ್ಷಾಂತರ ಕೋಟಿ ರೂ.ಗಳಿಗೆ ಹೆಚ್ಚಿಸಿವೆ. ದೇಶದ ಶೇಕಡಾ 62ರಷ್ಟು ಸಂಪತ್ತು ಕೇವಲ ಶೇಕಡಾ 1ರಷ್ಟು ಜನರಲ್ಲಿ ಶೇಖರಣೆಗೊಂಡಿದೆ. ಬಂಡವಾಳಶಾಹಿಗಳಿಗೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಎಲ್ಲ ನೀತಿಗಳನ್ನು ರೂಪಿಸಲಾಗುತ್ತಿದೆ ಹಾಗೂ ಜನಸಾಮಾನ್ಯರ ಹಿತವನ್ನು ಸಂಪೂರ್ಣವಾಗಿ ಮರೆತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸ್ವಾತಂತ್ರ್ಯವು ಕ್ರಾಂತಿಕಾರಿಗಳ ನೇತೃತ್ವದಲ್ಲಿ ದೊರಕದೆ, ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ನಮ್ಮ ದೇಶದ ಬಂಡವಾಳಶಾಹಿಗಳಿಗೆ ಸ್ವಾತಂತ್ರ ಹಸ್ತಾಂತರವಾಯಿತು. ಇದರ ಪರಿಣಾಮವಾಗಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಶೋಷಕ ಬಂಡವಾಳಶಾಹಿ ವ್ಯವಸ್ಥೆಯು ದೇಶದಲ್ಲಿ ನಿರ್ಮಾಣಗೊಂಡಿತು. ಶೋಷಣೆರಹಿತ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಭಗತಸಿಂಗ್, ಸುಭಾಷಚಂದ್ರ ಬೋಸರಂತಹ ಕ್ರಾಂತಿಕಾರಿಗಳ ಕನಸು ಕನಸಾಗಿಯೇ ಉಳಿಯಿತು ಎಂದು ಅವರು ತಿಳಿಸಿದರು.
ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ರಾಂತಿಕಾರಿ ರಾಜಿರಹಿತ ಪಂಥದಲ್ಲಿ ಮೂಡಿ ಬಂದ ಕಾಮ್ರೇಡ್ ಶಿವದಾಸ್ ಘೋμïರು, ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ನೈಜ ಕಾರ್ಮಿಕ ವರ್ಗದ ಕಮ್ಯುನಿಸ್ಟ್ ಪಕ್ಷದ ಅವಶ್ಯಕತೆಯನ್ನು ಮನಗಂಡರು. ಅಂದಿನ ಸಿಪಿಐ ಪಕ್ಷವು ನಾಮಾಂಕಿತ ಕಮ್ಯುನಿಸ್ಟ್ ಪಕ್ಷವಾಗಿರುವದರಿಂದ್ದಾಗಿ ಈ ನೆಲದಲ್ಲಿ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಎತ್ತಿಹಿಡಿಯಲು, ಮಾಕ್ರ್ಸ್‍ವಾದಿ-ಲೆನಿನ್‍ವಾದಿ ಸಿದ್ಧಾಂತವನ್ನು ಈ ನೆಲಕ್ಕನುಗುಣವಾಗಿ ಅಳವಡಿಸಿಕೊಂಡು ಪರಿಶ್ರಮದಾಯಕ ಹೋರಾಟದ ಮೂಲಕ ಎಸ್‍ಯುಸಿಐ(ಸಿ) ಪಕ್ಷವನ್ನು ಕೆಲವೇ ಸಂಗಾತಿಗಳೊಂದಿಗೆ ಕಟ್ಟಿದರು. ಈ ಹೋರಾಟದ ಗತಿಯಲ್ಲಿ ಮಾಕ್ರ್ಸ್‍ವಾದ-ಲೆನಿನವಾದ ತತ್ವಜ್ಞಾನವನ್ನು ಮತ್ತಷ್ಟು ಸಮೃದ್ಧಗೊಳಿಸಿದರು ಎಂದು ಅವರು ಹೇಳಿದರು.
ದೇಶದಲ್ಲಿ ಶೋಷಕ ಬಂಡವಾಳಶಾಹಿ ವರ್ಗದ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ನಂತರ ಎಲ್ಲ ರೀತಿಯ ಸಹಕಾರವನ್ನು ನೀಡಿದರೆ, ಇಂದು ಬಿಜೆಪಿ ಪಕ್ಷವು ತಾನೇನು ಕಡಿಮೆ ಎಂಬತೇ ಅಂಬಾನಿ-ಆದಾನಿಗಳ ಖಜಾನೆಯನ್ನು ತುಂಬುವಲ್ಲಿ ನಿರತವಾಗಿದೆ. ದೇಶದ ಜನರಿಗೆ ಕನಿಷ್ಟ ಮಟ್ಟದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಸತಿ, ಉಚಿತ ಶಿಕ್ಷಣ ಮತ್ತು ಆರೋಗ್ಯ ಹಾಗೂ ಉದ್ಯೋಗಗಳನ್ನು ನೀಡುವಲ್ಲಿ ಸಂಪೂರ್ಣವಾಗಿ ನಿಷ್ಕಾಳಜಿಯನ್ನು ತೋರಿಸುತ್ತಿವೆ. ಇಂದಿನ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿಪರ ಪಕ್ಷಗಳ ನೀತಿಗಳೇ ಕಾರಣ ಎಂಬ ಸತ್ಯವನ್ನು ದುಡಿಯುವ ವರ್ಗವು ಗ್ರಹಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಚುನಾವಣೆ ಹಾಗೂ ನಾಯಕರ ಬದಲಾವಣೆಯಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ಭ್ರಮೆಯಿಂದ ಹೊರಬೇಕು. ಈ ದಿಸೆಯಲ್ಲಿ ಪ್ರಜಾತಾಂತ್ರಿಕ ಚಳುವಳಿಗಳನ್ನು ಬೆಳೆಸುತ್ತಾ, ವರ್ಗ ಸಂಘರ್ಷವನ್ನು ತೀವ್ರಗೊಳಿಸುತ್ತಾ, ಅಂತಿಮವಾಗಿ ಶೋಷಣಾರಹಿತ ಸಮಾಜವಾದಿ ವ್ಯವಸ್ಥೆಯನ್ನು ಕಟ್ಟಲು ಕ್ರಾಂತಿಯನ್ನು ನೆರವೇರಿಸಬೇಕು. ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ದೇಶದ ದುಡಿಯುವ ವರ್ಗ, ವಿಮೋಚನೆಯ ಮಾರ್ಗ ತೋರಿಸಿದ ಶಿವದಾಸ್ ಘೋಷ್‍ರವರ ಚಿಂತನೆಗಳನ್ನು ಅಳವಡಿಸಿಕೊಂಡು ಕಾರ್ಮಿಕ ವರ್ಗದ ಪಕ್ಷ ಎಸ್‍ಯುಸಿಐ(ಸಿ) ಬಲಪಡಿಸಬೇಕೆಂದು ಅವರು ಕರೆ ನೀಡಿದರು.
ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯರು ಹಾಗೂ ಜಿಲ್ಲಾ ಕಾರ್ಯದರ್ಶಿಗಳಾದ ಕಾ. ಎಚ್.ವಿ. ದಿವಾಕರ್ ಅವರು ಮಾತನಾಡಿ, “ಪಶ್ಚಿಮ್ ಬಂಗಾಳದಲ್ಲಿ ಕೆಲವೇ ಸಂಗಾತಿಗಳೊಂದಿಗೆ ಕಾ. ಶಿವದಾಸ್ ಘೋಷ್ ಅವರು ಪ್ರಾರಂಭಿಸಿದ ಪಕ್ಷವು ಇಂದು 27 ರಾಜ್ಯಗಳಲ್ಲಿ ಹೋರಾಟಗಳನ್ನು ಬೆಳೆಸುತ್ತಿದೆ. ದೇಶದಲ್ಲಿ ಕಾರ್ಮಿಕರ-ರೈತರ-ವಿದ್ಯಾರ್ಥಿ-ಯುವಜನ-ಮಹಿಳೆಯರ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರಬಲ ಹೋರಾಟಗಳನ್ನು ಬೆಳೆಸಲು ವರ್ಗ ಹಾಗೂ ಸಮೂಹ ಸಂಘಟನೆಗಳಾದ ಎಐಯುಟಿಯುಸಿ, ಎಐಕೆಕೆಎಮ್‍ಎಸ್, ಎಐಡಿಎಸ್‍ಓ, ಎಐಡಿವೈಓ, ಎಐಎಮ್‍ಎಸ್‍ಎಸ್‍ಗಳು ಶ್ರಮಿಸುತ್ತಿವೆ ಎಂದರು.
ಜನರಲ್ಲಿ ಉನ್ನತ ನೀತಿ-ಸಂಸ್ಕøತಿಯನ್ನು ಬೆಳೆಸಲು ವಿವಿಧ ಸಾಂಸ್ಕøತಿಕ ಚಳುವಳಿಗಳನ್ನು ಹರಿಬಿಡಲಾಗುತ್ತಿದೆ. ದುಡಿಯುವ ವರ್ಗ ತನ್ನ ವಿಮೋಚನೆಗಾಗಿ ನೈಜ ಕಮ್ಯುನಿಸ್ಟ್ ಪಕ್ಷವನ್ನು ಬಲಪಡಿಸಬೇಕು. ದೇಶದಲ್ಲಿ ಎಸ್.ಯು.ಸಿ.ಐ(ಸಿ) ಪಕ್ಷವು ಅಂತಹ ನೈಜ ಕಮ್ಯುನಿಸ್ಟ್ ಪಕ್ಷವಾಗಿ ಹೊರಹೊಮ್ಮಿದೆ. ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಎಲ್ಲರೂ ಶಿವದಾಸ್ ಘೋಷ್‍ರ ಚಿಂತನೆಗಳನ್ನು ಅಳವಡಿಸಿಕೊಂಡು ತಮ್ಮ ಸ್ಥಳಗಳಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು, ಅದೇ ನಾವು ಶಿವದಾಸ್ ಘೋಷ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಕಾ. ಡಾ. ಚಂದ್ರಗಿರೀಶ್ ಅವರು ವಹಿಸಿದ್ದರು. ವೇದಿಕೆ ಮೇಲೆ ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯರಾದ ಕಾ. ಟಿ.ಎಸ್.ಸುನೀತಕುಮಾರ್, ಎಮ್. ಶಶಿಧರ್, ಪಕ್ಷದ ಯಾದಗಿರಿ ಜಿಲ್ಲೆಯ ಕಾರ್ಯದರ್ಶಿ ಕಾ. ಕೆ. ಸೋಮಶೇಖರ್ ಅವರು ಉಪಸ್ಥಿತರಿದ್ದರು.
ಬೆಳಿಗ್ಗೆ 11 ಗಂಟೆಗೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಡಾ. ಎಸ್.ಎಮ್. ಪಂಡಿತ್ ರಂಗಮಂದಿರದವರೆಗೆ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕಲಬುರ್ಗಿ, ವಿಜಯಪುರ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.