ಭಾರತಕ್ಕೆ ಸಹಾಯ ಮಾಡಿ ಬ್ರಿಟನ್ ದೊರೆ ಚಾರ್ಲ್ಸ್ ಮನವಿ

ಲಂಡನ್, ಏ. ೨೯: ಕೋವಿಡ್ ಸಂಕಷ್ಟದಲ್ಲಿದ್ದ ದೇಶಗಳಿಗೆ ಭಾರತ ನೆರವಿನ ಹಸ್ತಚಾಚಿತ್ತು. ಇದೀಗ ಭಾರತ ಸಂಕಷ್ಟಕ್ಕೆ ಸಿಲುಕಿದ್ದು ನಾವು ಅವರೊಂದಿಗೆ ನಿಲ್ಲಬೇಕು ಎಂದು ಬ್ರಿಟನ್ ರಾಜಕುಮಾರ ಚಾರ್ಲ್ಸ್ ಹೇಳಿದ್ದಾರೆ.
ಬ್ರಿಟನ್ ರಾಜಕುಮಾರ ಚಾರ್ಲ್ಸ್ ತಮ್ಮ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿರುವ ಭಾರತಕ್ಕೆ ತುರ್ತಾಗಿ ನೆರವಿನ ಹಸ್ತ ನೀಡಬೇಕಿದ್ದು ಕೋವಿಡ್ ಸಾಂಕ್ರಾಮಿಕ ರೋಗದ “ಭಯಾನಕ” ಎರಡನೇ ಅಲೆಯನ್ನು ನಿಭಾಯಿಸುವಾಗ ಭಾರತಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಬ್ರಿಟಿಷ್ ಸಿಂಹಾಸನದ ೭೨ ವರ್ಷದ ಉತ್ತರಾಧಿಕಾರಿ ಚಾರ್ಲ್ಸ್ ಭಾರತದ ಬಗೆಗಿನ ತಮ್ಮ ’ಅಪಾರ ಪ್ರೀತಿ’ಯ ಬಗ್ಗೆ ಮಾತನಾಡಿದರು. ಒಂದು ವರ್ಷದಿಂದ ಸಾಂಕ್ರಾಮಿಕವು ಪ್ರಪಂಚದಾದ್ಯಂತದ ನಮ್ಮಲ್ಲಿ ಅನೇಕರ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಈ ವಾರ, ಕೊರೋನಾ ಭಾರತದಲ್ಲಿ ಭೀಕರತೆಯನ್ನು ಸೃಷ್ಟಿಸುತ್ತಿದೆ. ಈ ದುರಂತ ದೃಶ್ಯಗಳನ್ನು ಕಂಡು ನಾನು ತುಂಬಾ ದುಃಖಿತನಾಗಿದ್ದೇನೆ ಎಂಬ ಪ್ರಿನ್ಸ್ ಚಾರ್ಲ್ಸ್ ಹೇಳಿಕೆಯನ್ನು ಕ್ಲಾರೆನ್ಸ್ ಹೌಸ್ ಬಿಡುಗಡೆ ಮಾಡಿದೆ.

ಭಾರತೀಯ ನೆರವು ಮತ್ತು ಜಾಣ್ಮೆ ಇತರ ದೇಶಗಳಿಗೆ ಬೆಂಬಲವಾಗಿದೆ. ಭಾರತವು ಇತರರಿಗೆ ಸಹಾಯ ಮಾಡಿದಂತೆ, ಈಗ ನಾವು ಭಾರತಕ್ಕೆ ಸಹಾಯ ಮಾಡಬೇಕು ಎಂದು ಅವರು ಹೇಳಿದರು.

‘ನಾವು ಈ ಯುದ್ಧವನ್ನು ಗೆಲ್ಲುತ್ತೇವೆ’. ಬ್ರಿಟಿಷ್ ಏಷ್ಯನ್ ಟ್ರಸ್ಟ್, ಭಾರತದಲ್ಲಿನ ಆಸ್ಪತ್ರೆಗಳ ತುರ್ತು ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲು “ಆಕ್ಸಿಜನ್ ಫಾರ್ ಇಂಡಿಯಾ” ಎಂಬ ತುರ್ತು ಅಭಿಯಾನವನ್ನು ಆರಂಭಿಸಿದೆ ಎಂದು ಚಾರ್ಲ್ಸ್ ಹೇಳಿದರು.