ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ : ಸಿದ್ದಬಟ್ಟೆ

ಬೀದರ :ನ.27: ತಾಲೂಕಿನ ಶಮಶೀರನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ನಿಮಿತ್ತ ‘ಸಂವಿಧಾನ ಪೂರ್ವ ಪೀಠಿಕೆ’ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .

ಸಂವಿಧಾನ ಪೂರ್ವ ಪೀಠಿಕೆಗೆ ಕಂಠಪಾಠ ಮಾಡಿ ಹೇಳಲು ಸಮಯ ಮಿತಿಯನ್ನು ನೀಡಲಾಗಿತ್ತು, ಈ ಸ್ಪರ್ಧೆಯಲ್ಲಿ ಕು.ಸಪ್ನಾ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಜೊತೆಗೆ ಚಿತ್ರಕಲಾ ಸ್ಪರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಕಿರಣ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಸ್ಪರ್ಧೆಯಲ್ಲಿ ವಿಜೇತ ಸ್ಪರ್ಧಾಳುಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಪನ್ಮೂಲ ಶಿಕ್ಷಕ ಶಾಲಿವಾನ ಸಿದ್ದಬಟ್ಟೆ ಅವರು ಮಾತನಾಡಿ ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು 1949 ರ ನವೆಂಬರ್ 26 ರಂದೇ ಆದರೂ ಅನುಷ್ಠಾನಕ್ಕೆ ತಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸಿದೆ, ಸರ್ವರಿಗೂ ಸಮಾನತೆ, ಮೂಲಭೂತ ಹಕ್ಕುಗಳನ್ನು/ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ‘ಸಂವಿಧಾನ’ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು.
ನವೆಂಬರ್ 26 ರಂದು ಸಂವಿಧಾನ ದಿನ ಆಚರಿಸುವಂತೆ 2015 ರ ನವೆಂಬರ್ 19 ರಂದು ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಗುರು ಬಸವಣಪ್ಪ ಮಠ, ಎಸ್.ಡಿ.ಎಮ್ ಸಿ. ಅಧ್ಯಕ್ಷ ಬಸವರಾಜ ಸಾಗರ, ಶಾಲಾ ಸಿಬ್ಬಂದಿಗಳಾದ ಸಂಜೀವಕುಮಾರ ಮೇಟಿ, ಶ್ರೀಮತಿ ಭಾರತಿ, ಸುನಿತಾ, ಗೋದಾವರಿ, ಚಂದ್ರಕಾಂತ ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.