ಭಾರತಕ್ಕೆ ಬರುವ ವಿದೇಶಿಗರಿಗೆ ಹೊಸ ನಿಯಮ ಜಾರಿ

ನವದೆಹಲಿ, ನ.೨೨- ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಗಸೂಚಿಯನ್ನು ಪರಿಷ್ಕರಿಸಿದೆ. ಏರ್ ಸುವಿಧಾ ಪೋರ್ಟಲ್ ನಲ್ಲಿ ಕೋವಿಡ್ ಲಸಿಕೆಗಾಗಿ ಸ್ವಯಂ ಘೋಷಣೆಯ ನಮೂನೆಗಳು ಇನ್ನು ಮುಂದೆ ಭರ್ತಿ ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದು, ಈ ನಿರ್ಧಾರ ಇಂದಿನಿಂದಲೇ ಜಾರಿಗೆ ಬರಲಿದೆ. ಸಹಜವಾಗಿಯೇ ಇದು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೆಮ್ಮದಿ ತಂದಿದೆ.
ಆದರೆ ಭವಿಷ್ಯದಲ್ಲಿ ಕೋವಿಡ್ ಸೋಂಕಿನ ಸ್ಥಿತಿಯನ್ನು ಅವಲೋಕನ ನಡೆಸಿ, ಅಗತ್ಯಬಿದ್ದಲ್ಲಿ ಪರಿಷ್ಕೃತಗೊಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಆದರೆ ದೇಶದಲ್ಲಿ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ಕಡೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದರ ಸಾಧ್ಯತೆ ಕಡಿಮೆ. ಕೋವಿಡ್-೧೯ ಪ್ರಕರಣಗಳ ಸಂಖ್ಯೆಯು ನಿರಂತರ ಕ್ಷೀಣಿಸುತ್ತಿರುವ ಹಿನ್ನೆಲೆ ಮತ್ತು ಜಾಗತಿಕವಾಗಿ ಹಾಗೂ ಭಾರತದಲ್ಲಿ ಕೊವೀಡ್ – ೧೯ ವ್ಯಾಕ್ಸಿನೇಷನ್ ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಆಗಮನಕ್ಕಾಗಿ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪರಿಷ್ಕೃತಗೊಳಿಸಿದೆ. ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, ಏರ್ ಸುವಿಧಾ ಆನ್ ಲೈನ್ ಪೋರ್ಟಲ್ ಸ್ಟ್ಯಾಂಡ್ ನಲ್ಲಿ ಸ್ವಯಂ ಘೋಷಣೆ ನಮೂನೆಯನ್ನು ಸಲ್ಲಿಸುವುದನ್ನು ನಿಲ್ಲಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಕೋವಿಡ್ ಪರಿಸ್ಥಿತಿಯ ದೃಷ್ಟಿಯಿಂದ ಅಗತ್ಯವಿದ್ದರೆ ನಿಯಮವನ್ನು ಪರಿಶೀಲಿಸಬಹುದು ಎಂದು ತಿಳಿಸಿದೆ. ವಿಮಾನಯಾನ ಸಚಿವಾಲಯದ ಏರ್ ಸುವಿಧಾ ಪೋರ್ಟಲ್ ನಲ್ಲಿರುವ ತಮ್ಮ ಮಾಹಿತಿಯನ್ನು ದಾಖಲಿಸುವುದು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯವಾಗಿತ್ತು. ಅದರಲ್ಲಿ, ಪ್ರಯಾಣಿಕರು ಸ್ವೀಕರಿಸಿದ ಕೋವಿಡ್ ಲಸಿಕೆ ಡೋಸ್ ಳ ಸಂಖ್ಯೆ ಮತ್ತು ಅವರ ದಿನಾಂಕಗಳನ್ನು ಒಳಗೊಂಡಂತೆ ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ಘೋಷಿಸಬೇಕಾಗಿತ್ತು. ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್‌ಗಳ ಬಳಕೆ ಮತ್ತು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್‌ಗಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸುವುದು ಸಹ ಅಗತ್ಯವಾಗಿದೆ ಎಂದು ಹೇಳಿದೆ.