ಭಾರತಕ್ಕೆ ಅಮೆರಿಕ ಸಂಸದರ ಬೆಂಬಲ

ವಾಷಿಂಗ್ಟನ್,ಆ.೧- ಸುತ್ತಮುತ್ತಲಿನ ದೇಶಗಳ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ತಂಟೆಕೋರ ಚೀನಾ ಸೇನಾಕ್ರಮವನ್ನು ವಿರೋಧಿಸಿರುವ ಅಮೆರಿಕ ಸಂಸದರು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಚೀನಾ ಗಡಿ ಪ್ರದೇಶ ಗಾಲ್ವಾನ್‌ನಲ್ಲಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಉಂಟಾದ ಸಂಘರ್ಷದಿಂದ ಎರಡೂ ಕಡೆ ಸಾವು-ನೋವು ಸಂಭವಿಸಿತ್ತು. ಭಾರತದ ಸೇನೆ ಚೀನಾ ಸೇನೆಯನ್ನು ಎದುರಿಸುವಲ್ಲಿ ದಿಟ್ಟತನ ಪ್ರದರ್ಶಿಸಿತ್ತು.
ಭಾರತದ ಸೇನೆ ಚೀನಾ ಸೇನೆಗೆ ಪ್ರತಿರೋಧವೊಡ್ಡಿದ್ದನ್ನು ಪ್ರಶಂಸಿಸಿರುವ ಅಮೆರಿಕ ಸಂಸದರು ಭಾರತಕ್ಕೆ ಪಕ್ಷಬೇಧ ಮರೆತು ಬೆಂಬಲ ಸೂಚಿಸಿದ್ದಾರೆ.
ಭಾರತ ಹಾಗೂ ಚೀನಾ ಸೈನಿಕರ ನಡುವೆ ಉಂಟಾದ ಸಂಘರ್ಷದಲ್ಲಿ ಭಾರತದ ೨೦ ಜನ ಸೈನಿಕರು ಹುತಾತ್ಮರಾಗಿರುವುದನ್ನು ಭಾರತ ಹೇಳಿಕೊಂಡಿದ್ದರೂ ಚೀನಾ ಮಾತ್ರ ತನ್ನ ಸೈನಿಕರ ಸಾವು-ನೋವು ಕುರಿತಂತೆ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ.
ಹೌಸ್ ಆಫ್ ರೆಪ್ರಸೆಂಟೆಟಿವ್‌ನ ಮತ್ತು ಸೆನೆಟ್‌ನಲ್ಲಿ ಮಾತನಾಡಿರುವ ಸಂಸದರು, ಭಾರತದ ಗಡಿ ಅತಿಕ್ರಮಿಸಲು ಚೀನಾ ನಡೆಸಿದ ದುಸ್ಸಾಹಾಸಕ್ಕೆ ಭಾರತ ಪ್ರತಿರೋಧವೊಡ್ಡಿರುವುದನ್ನು ಪ್ರಶಂಸಿಸಿದ್ದಾರೆ. ಈ ವೇಳೆ ಮಾತನಾಡಿರುವ ಡೆಮಾಕ್ರಟಿಕ್ ಹಿರಿಯ ಸಂಸದ ಫ್ರಾಂಕ್ ಪಲ್ಲೋನ್ ಚೀನಾ ಆಕ್ರಮಣಕಾರಿ ನೀತಿಯನ್ನು ಸ್ಥಗಿತಗೊಳಿಸಬೇಕು. ಶಾಂತಿ ಮಾತುಕತೆ ಮೂಲಕ ಗಡಿ ಗೊಂದಲ ಪರಿಹರಿಸಿಕೊಳ್ಳಬೇಕು ಎಂದೂ ಹೇಳಿದ್ದಾರೆ.
ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರೊಂದಿಗೆ ಮಾತನಾಡಿರುವ ಸಂಸದರು, ಚೀನಾ ವಿರುದ್ದ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅದಕ್ಕೆ ಭಾರತ ಪ್ರತಿಯಾಗಿ ಕೈಗೊಂಡ ಕ್ರಮಕ್ಕೆ ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.