ಭಾನಾಮತಿ ಶಂಕೆ: ಒಂದೇ ಕುಟುಂಬದ ಮೂವರಿಗೆ ಥಳಿತ ವಿಡಿಯೋ ವೈರಲ್

ಕಲಬುರಗಿ:ಏ.14:ಭಾನಾಮತಿ ಮಾಡಿದ್ದಾರೆಂಬ ಶಂಕೆಯಿಂದ ತಾಯಿ, ಪುತ್ರ ಹಾಗೂ ಸೊಸೆ ಸೇರಿ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪರದಾರ್ ಮೋತಕಪಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಪರದಾರ್ ಮೋತಕಪಳ್ಳಿ ಗ್ರಾಮದ 14 ಜನ ಸೇರಿಕೊಂಡು ಶಿವಲೀಲಾ, ಬಕ್ಕಮ್ಮ ಮತ್ತು ಸಂಗಪ್ಪಾ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಮೋತಕಪಳ್ಳಿ ಗ್ರಾಮದ ನಿವಾಸಿ ಹಣಮಂತ್ ಭೂತಪೂರ್ ಮತ್ತು ಆತನ 14 ಜನ ಸಂಗಡಿಗರು ಸೇರಿ ಗ್ರಾಮದ ಹನುಮಾನ್ ಮಂದಿರದ ಬಳಿಯ ಕಂಬಕ್ಕೆ ಕಟ್ಟಿ ಮೂವರಿಗೆ ಕಲ್ಲು, ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಹಣಮಂತ್ ಭೂತಪೂರ್ ಮನೆಯಲ್ಲಿರುವ ವ್ಯಕ್ತಿಗೆ ಹುಷಾರಿರಲಿಲ್ಲ. ಅದಕ್ಕೆ ಈ ಮೂವರು ಸೇರಿ ಮಾಟ, ಮಂತ್ರ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಸುಲೇಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಹಲ್ಲೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದಾರೆ.