ಭಾಜಪಾ ವತಿಯಿಂದ ಕನಕದಾಸರ ಜಯಂತಿ ಆಚರಣೆ

ಮೈಸೂರು, ನ.22:- ಇಂದು ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ನಾವು ಮಹಾತ್ಮರ ಜಯಂತಿಯನ್ನು ಒಂದೊಂದು ಜಾತಿಗೆ ಸೀಮಿತ ಮಾಡಬಾರದು ಅವರು ಇಡೀ ಸಮಾಜದ ಆಸ್ತಿ. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವತಿಯಿಂದ ಕನಕ ಜಯಂತಿಯನ್ನು ರಾಜ್ಯಾ ದ್ಯಂತ ಆಚರಣೆ ಮಾಡಲಾಯಿತು ಆಗ ನನಗೂ ಸಹ ಜಿಲ್ಲಾ ಮಂತ್ರಿಯಾಗಿ ಆಚರಣೆ ಮಾಡುವ ಸದವಕಾಶ ದೊರೆತಿದ್ದು ನನ್ನ ಪುಣ್ಯ. ಪರಮಾತ್ಮ ಕೃಷ್ಣ ಏನು ಕನಕನ ಮನಸ್ಸಿಗೆ ನೀಡುತ್ತಿದ್ದನೋ ಅದನ್ನೇ ಅವರು ಕಾವ್ಯಗಳ ಮೂಲಕ ನಮಗೆ ನೀಡಿದರು, ಕನಕದಾಸರ ಒಂದೊಂದು ಕಾವ್ಯಗಳನ್ನು ಓದಿ ತಿಳಿದುಕೊಂಡಾಗ ನಮಗೆ ಜೀವನ ಏನು ಎಂದು ಅರ್ಥವಾಗುತ್ತದೆ. ಕನಕದಾಸರ ಜಯಂತಿಯನ್ನು ಒಂದು ದಿನ ಆಚರಣೆ ಮಾಡಿದರೆ ಏನೂ ಬರುವುದಿಲ್ಲ, ದಿನಂಪ್ರತಿ ನಾವು ಅವರ ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಪುಟ್ಟ ಬಾಲಕರಾಗಿದ್ದ ಕನಕದಾಸರು ಅವರ ಗುರುಗಳು ಎಲ್ಲಾ ವಿದ್ಯಾರ್ಥಿಗಳ ಕೈಯಲ್ಲಿ ಬಾಳೆ ಹಣ್ಣನ್ನು ಕೊಟ್ಟು ಯಾರೂ ಇಲ್ಲದೇ ಇರುವ ಜಾಗದಲ್ಲಿ ಬಾಳೆ ಹಣ್ಣನ್ನು ತಿಂದುಕೊಂಡು ಬನ್ನಿ ಎಂದು ಹೇಳಿದಾಗ ಕನಕರು ಬಾಳೆ ಹಣ್ಣನ್ನು ತಿನ್ನದೇ , ತನ್ನ ಗುರುಗಳ ಬಳಿ ಬಂದು ದೇವರಿಲ್ಲದ ಸ್ಥಳ ಯಾವುದೂ ಇಲ್ಲ ಎಂದು ಹೇಳಿದ್ದರು, ಅಂದರೆ ಅಷ್ಟು ಸಣ್ಣ ವಯಸ್ಸಿಗೆ ಕನಕರಿಗೆ ಅದೆಂತಾ ಆಘಾದವಾದ ಭಕ್ತಿ ಹಾಗೂ ಜ್ಞಾನ ಇತ್ತು ಎಂದು ನಾವು ಗಮನಿಸಬೇಕು. ಉಡುಪಿಗೆ ಈಗಲೂ ಹೋದಂತಹ ಸಂದರ್ಭದಲ್ಲಿ ನಾವು ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣನನ್ನು ನೋಡುತ್ತೇವೆ, ಆ ಕೀರ್ತಿ ಕನಕರಿಗೆ ಸಲ್ಲುತ್ತದೆ. ಆ ಕೃಷ್ಣ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡವರು ಕನಕದಾಸರು. ಕನಕದಾಸರ ಆದರ್ಶವನ್ನು ಮುಂದಿಟ್ಟುಕೊಂಡು ನಾವೆಲ್ಲಾ ನಮ್ಮ ಜೀವನವನ್ನು ನಡೆಸೋಣ ಎಂದರು.
ವಿಶೇಷವಾಗಿ ಕೆ.ಆರ್ ಕ್ಷೇತ್ರದಲ್ಲಿ ಒಂದು ಪಾರ್ಕ್ ಅನ್ನು ಕನಕದಾಸರ ಹೆಸರಿನಲ್ಲಿ ನಿರ್ಮಾಣ ಮಾಡಿ ಅಲ್ಲಿ ಕನಕದಾಸರ ಸಂಪೂರ್ಣ ಜೀವನ ಚರಿತ್ರೆಯನ್ನು ಆಡಿಯೋ ವಿಷುವಲ್ ಹಾಗೂ ಕೆತ್ತನೆಗಳ ಮೂಲಕ ನಿರ್ಮಾಣ ಮಾಡಲಾಗುವುದು ಹಾಗೂ ಇನ್ನು 60 ದಿನಗಳ ಒಳಗೆ ಆದರ ಗುದ್ದಲಿ ಪೂಜೆಯನ್ನೂ ಸಹ ಮಾಡಲಾಗುವುದು ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷರಾದ ಎಂ.ಆರ್ ಬಾಲಕೃಷ್ಣ, ಸಂತೋಷ್ ಶಂಭು, ಪ್ರಧಾನ ಕಾರ್ಯದರ್ಶಿಗಳಾದ ಓಂ.ಶ್ರೀನಿವಾಸ್, ಒಬಿಸಿ ಮೋರ್ಚಾದ ಅಧ್ಯಕ್ಷರಾದ ಶಿವಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸೋಮಶೇಖರ್ ಬಿಎಲ್‍ಎ 1 ಆದ ಪ್ರಸಾದ್ ಬಾಬು, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಮೈ.ಪು.ರಾಜೇಶ್, ಅನ್ನಪೂರ್ಣ ಇನ್ನಿತರರು ಉಪಸ್ಥಿತರಿದ್ದರು.