ಭವಿಷ್ಯ ನಿಧಿ ಉಳಿತಾಯದ ಕುರಿತು ಜಾಗೃತಿ ಮೂಡಿಸಲು ನಿಧಿ ಆಪ್ ಕೆ ನಿಕಟ್ 2.0

ಕಲಬುರಗಿ:ಮಾ.28: ನಗರದ ಹೈಕೋರ್ಟ್-ರಾಮಮಂದಿರ ರಸ್ತೆಯಲ್ಲಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವಿಭಾಗೀಯ ಕಚೇರಿ ವತಿಯಿಂದ ಭವಿಷ್ಯ ನಿಧಿ ಉಳಿತಾಯದ ಕುರಿತು ಜಾಗೃತಿ ಮೂಡಿಸಲು ನಿಧಿ ಆಪ್ ಕೆ ನಿಕಟ್ 2.0 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಘಟನೆಯ ಪ್ರವರ್ತನಾಧಿಕಾರಿ ಬಿ.ರವೀಂದ್ರ ಅವರು ಮಾತನಾಡಿ, ಕುಟುಂಬದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಕಾರ್ಮಿಕರು ಭವಿಷ್ಯ ನಿಧಿಯ ಮೂಲಕ ತಮ್ಮ ಗಳಿಕೆಯ ಹಣದಲ್ಲಿ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಯಾವುದೇ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸರಕಾರಿ ನೌಕರರಿಗೆ ಲಭಿಸುವಂತೆಯೇ ಪಿಂಚಣಿ ಮತ್ತು ನಿವೃತ್ತಿ ವೇತನ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಭವಿಷ್ಯ ನಿಧಿ ಸಂಘಟನೆ ಕಾರ್ಯನಿರ್ವಹಿಸುತ್ತದೆ. ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿರುವ ಕಾರ್ಮಿಕರ ಮಾಸಿಕ ವೇತನದ ಶೇ.12ರಷ್ಟು ಮೊತ್ತವನ್ನು ವೇತನದಿಂದ ಕಡಿತಗೊಳಿಸಲಾಗುವುದು. ಹೀಗೆ ಕಡಿತ ಮಾಡಿದ ಮೊತ್ತಕ್ಕೆ ಉದ್ಯೋಗಧಾತ ಸಂಸ್ಥೆಯಿಂದ ಮಾಸಿಕ ಶೇ.12ರಷ್ಟು ಮೊತ್ತ ಸೇರ್ಪಡೆ ಮಾಡಿ ಭವಿಷ್ಯ ನಿಧಿ ಸಂಘಟನೆಗೆ ಪಾವತಿಸಲಾಗುತ್ತದೆ. ಕಾರ್ಮಿಕರ 58ನೇ ವಯಸ್ಸಿನಿಂದ ಕಡಿತಗೊಳಿಸಿದ ಹಣಕ್ಕೆ ನಿಗದಿತ ಬಡ್ಡಿ ಸೇರ್ಪಡೆ ಮಾಡಿ ಪಿಂಚಣಿ ಹಾಗೂ 60ನೇ ವಯಸ್ಸಿನಿಂದ ನಿವೃತ್ತಿ ವೇತನ ನೀಡಲಾಗುತ್ತದೆ ಎಂದರು.
ಒಂದುವೇಳೆ ಕರ್ತವ್ಯದ ಮೇಲಿದ್ದಾಗಲೇ ಕಾರ್ಮಿಕ ಮೃತಪಟ್ಟರೆ, ಅಪಘಾತಕ್ಕೆ ತುತ್ತಾದರೆ ಭವಿಷ್ಯ ನಿಧಿ ಸಂಘಟನೆಯಿಂದ ಪಿಂಚಣಿ ಲಭಿಸುತ್ತದೆ. ಇದರ ಜೊತೆಗೆ, ಭವಿಷ್ಯ ನಿಧಿ ಮೊತ್ತ ಕಡಿತಗೊಳ್ಳಲು ಆರಂಭಗೊಂಡ ನಂತರದ ಐದು ವರ್ಷದ ನಂತರ ಕಾರ್ಮಿಕರ ಕೌಟುಂಬಿಕ ಅಗತ್ಯಗಳಾದ ಮದುವೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ನಿವೇಶನ ಖರೀದಿಯಂತಹ ಸಂದರ್ಭಗಳಲ್ಲಿ ಭವಿಷ್ಯ ನಿಧಿ ಸಂಘಟನೆಯಿಂದ ಮುಂಗಡ ಮೊತ್ತವನ್ನು ಸಹ ನೀಡಲಾಗುತ್ತದೆ. ಹಾಗಾಗಿ, ಕಾರ್ಮಿಕರು ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ತಮ್ಮ ವೇತನದಲ್ಲಿ ಪ್ರತಿ ತಿಂಗಳು ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸಲು ಸೂಚಿಸಿದಾಗ, ಭವಿಷ್ಯ ನಿಧಿ ಸಂಘಟನೆಯಿಂದ ಜಾಗತಿಕ ಖಾತೆ ಸಂಖ್ಯೆ (ಯುಎಎನ್) ತೆರೆದು ಮಾಸಿಕ ಉಳಿತಾಯ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಸಲಹೆ ನೀಡಿದರು.
ನಿಧಿ ಆಪ್ ಕೆ ನಿಕಟ್:
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಕಾರ್ಯನಿರ್ವಹಣೆ ಮತ್ತು ಅದರ ಲಾಭಗಳ ಕುರಿತು ಜಾಗೃತಿ ಮೂಡಿಸಲು ಸಂಘಟನೆಯಿಂದ ನಿಧಿ ಆಪ್ ಕೆ ನಿಕಟ್ 2.0 ಕಾರ್ಯಕ್ರಮ ರೂಪಿಸಲಾಗಿದೆ. ಇದರಿಂದಾಗಿ ಕಾರ್ಮಿಕರು ಭವಿಷ್ಯ ನಿಧಿ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಕಾರ್ಮಿಕರು ಈ ಸೇವೆಯ ಲಾಭ ಪಡೆಯಬೇಕೆಂದು ಬಿ.ರವೀಂದ್ರ ಮನವಿ ಮಾಡಿದರು.
ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಉಳಿತಾಯದ ಕುರಿತು ಪ್ರತಿಯೊಬ್ಬರಲ್ಲೂ ಸ್ಪಷ್ಪತೆ ಇರಬೇಕು. ಏಕೆಂದರೆ ಇಂದು ಉಳಿಸಿದ ಒಂದು ರೂಪಾಯಿ ನಾಳೆ ಗಳಿಸುವ ಎರಡು ರೂಪಾಯಿಗೆ ಸಮವಾಗಿರುತ್ತದೆ. ಹಾಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಂದ ಹಿಡಿದು ಎಲ್ಲ ಕಾರ್ಮಿಕರು ಕಾರ್ಮಿಕರ ಭವಿಷ್ಯ ನಿಧಿಯ ಮೂಲಕ ಉಳಿತಾಯ ಆರಂಭಿಸಬೇಕು. ಇದರಿಂದ ಕುಟುಂಬದ ಹಿತದೃಷ್ಟಿಯಿಂದ ಆರ್ಥಿಕ ಭದ್ರತೆ ಖಾತ್ರಿಪಡಿಸಿಕೊಳ್ಳಬಹುದು ಆಪ್ತ ಸಲಹೆ ನೀಡಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಸಾಮಾಜಿಕ ಸುರಕ್ಷಾ ಸಹಾಯಕರಾದ ವರುಣದೇವ ಮತ್ತು ಮಹಮ್ಮದ್ ಯೂಸುಫ್, ವಿವಿಎನ್ ಶಾಲೆಯ ಮುಖ್ಯಗುರು ಅಂಬಿಕಾ ರೆಡ್ಡಿ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಶಿಕ್ಷಕಿ ಶೀಬಾ ರುಚಿತಾ ಸ್ವಾಗತಿಸಿದರು. ಶಿಕ್ಷಕರಾದ ಶ್ರೀಪಾದ ನಾಯಕ ನಿರೂಪಿಸಿದರು. ಮಧುಮತಿ ಗದ್ವಾಲ್ ವಂದಿಸಿದರು.