ಭವಿಷ್ಯದ ಬೆಳಕು ಮತದಾರರ ಜಾಗೃತಿ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.18:- ಚಾಮರಾಜನಗರ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭವಿಷ್ಯದ ಬೆಳಕು ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಜೆ.ಎಸ್.ಎಸ್. ಬಾಲಕರ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಕ್ಷೇತ್ರಭೇಟಿ, ನಾಟಕ, ವೀಡಿಯೋ, ಪೋಷಕರಿಗೆ ಪತ್ರ ಬರೆಯುವ ಸ್ಪರ್ಧೆ, ಇತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದಪ್ಪನವರು ಮಾತನಾಡಿ ಮತದಾನ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಜೆ.ಎಸ್.ಎಸ್. ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನಾಗೇಶ್ವರಿ ಅವರು ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆ ಹಾಗೂ ಈ ಬಗ್ಗೆ ಅರಿವು ಮೂಡಿಸಬೇಕಾದ ವಿಷಯಗಳ ಕುರಿತು ವಿವರಿಸಿದರು.
ಚುನಾವಣಾ ಸಾಕ್ಷರತಾ ಕ್ಲಬ್ ನ ಶಿಕ್ಷಣ ಇಲಾಖೆಯ ಅಧಿಕಾರಿ ನಿರಂಜನ್ ಕುಮಾರ್ ಅವರು ಮಾತನಾಡಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಪರಶಿವಮೂರ್ತಿ, ಬಿ. ರೇವಣ್ಣ, ಇನ್ನಿತರರು ಉಪಸ್ಥಿತರಿದ್ದರು.