ಭವಿಷ್ಯದ ನಾಡಿಗೆ ಶಿಕ್ಷಕರ ಪ್ರಯೋಗ ಮೇಲ್ಪಂಕ್ತಿ: ಎಸ್. ಅಂಗಾರ

ಪುತ್ತೂರು, ಮಾ.೨೮- ದೇಶದ ಭವಿಷ್ಯತನ್ನು ನಿರ್ಧರಿಸುವ ಪ್ರಜೆಗಳನ್ನು ರೂಪಿಸುವ ಗುರುವಿನ ಸ್ಥಾನವನ್ನು ಪಡೆದಿರುವ ಶಿಕ್ಷಕರು ತಮ್ಮ ವೃತ್ತಿ ಕಾರ್ಯಕ್ಷೇತ್ರದಲ್ಲಿ ವಿವಿಧ ಪ್ರಯೋಗಗಳ ಮೂಲಕ ಮೇಲ್ಪಂಕ್ತಿ ಹಾಕಿಕೊಳ್ಳಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಿಕ್ಷಕರು ಕೆಲಸ ಮಾಡುವ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕ ಕೊಡುಗೆಗಳನ್ನು ಕೊಡಬೇಕು ಎಂದು ಸಚಿವ ಎಸ್. ಅಂಗಾರ ಹೇಳಿದರು.

ಅವರು ಶನಿವಾರ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಪುತ್ತೂರು-ಕಡಬ ತಾಲೂಕು ಶಿಕ್ಷಕರ ಪ್ರಥಮ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿದರು.  ದೇಸಿ ವೈಭವ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಸಂಜೀವ ಮಠಂದೂರು, ಕನ್ನಡದ ಹಿರಿಮೆ ಸಂಸ್ಕೃತಿಯ ಗರಿಮೆ ಹೆಚ್ಚಿಸುವಲ್ಲಿ ಪುತ್ತೂರಿನ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯುತ್ತದೆ. ಭಾಷಾ ಅನುಷ್ಟಾನದಲ್ಲಿ ಶಿಕ್ಷಕ ವಲಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ. ಯುವ ಪೀಳಿಗೆಗೆ ಕನ್ನಡ ಭಾಷೆಯ, ಸಂಸ್ಕೃತಿಯ ಪ್ರೇರಣೆ ನೀಡುವ ಕೆಲಸ ಶಾಲಾ ಹಂತದಲ್ಲಿಯೇ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಮ್ಮೇಳನದ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಭಾರತೀಯ ಸಂಸ್ಕೃತಿ ಮತ್ತು ಭಾಷೆಯನ್ನು ಬೆಳೆಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಮಾತೃಭಾಷೆ ಮೂಲಾಧಾರ

ಸಮ್ಮೇಳನದ ಅಧ್ಯಕ್ಷ ರಮೇಶ್ ಉಳಯ, ಶಿಕ್ಷಣ ಯಾವ ಮಾಧ್ಯಮ ಎಂಬ ಗೊಂದಲದ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇದೆ. ಒಟ್ಟು ವ್ಯವಸ್ಥೆಯಲ್ಲಿ ಬಹಳಷ್ಟು ಆಂಗ್ಲ ಮಾಧ್ಯಮ ಶಾಲೆಗಳಿದ್ದರೂ ಅಲ್ಲಿಂದ ಮೂಡಿಬಂದ ಸಾಹಿತ್ಯಿಕ ಅಂಶಗಳಿಗೆ ಉದಾಹರಣೆಗಳು ಸಿಗುವುದು ಅಪರೂಪ. ಕನ್ನಡ ಭಾಷೆಯಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಸಾಹಿತ್ಯಿಕ ಉತ್ಪಾದಕಗಳು ಸಿಕ್ಕಿರುವುದನ್ನು ನಾವು ಕಾಣುತ್ತೇವೆ. ಹಾಗಾಗಿ ಶಿಕ್ಷಣ ಮಾತೃ ಭಾಷೆಯಲ್ಲಿರಬೇಕು. ಮಾತೃಭಾಷೆ ಶಿಕ್ಷಣಕ್ಕೆ ಮೂಲಾಧಾರವಾಗಬೇಕು. ಇದರಿಂದಾಗಿ ಶಿಕ್ಷಣ ಸಾಹಿತ್ಯಿಕ ರೂಪವನ್ನು ಪಡೆದುಕೊಳ್ಳುತ್ತದೆ ಎಂದರು.

ಕಡಬ ತಾಪಂ ಅಧ್ಯಕ್ಷೆ ರಾಜೇಶ್ವರ ಕನ್ಯಾಮಂಗಲ, ಆಚಾರ್ಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಮ್ಮೇಳನ ಸಂಚಿಕೆಯನ್ನು ಪುತ್ತೂರು ತಾಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಬಿಡುಗಡೆಗೊಳಿಸಿದರು. ಚಿತ್ರಕಲಾ ಪ್ರದರ್ಶನವನ್ನು ಕಡಬ ತಾಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ. ಕುಸುಮಾ ಉದ್ಘಾಟಿಸಿದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಆಶಯ ಮಾತುಗಳನ್ನಾಡಿದರು. ಪರಿಷತ್‌ನ ಉದ್ಘಾಟನೆಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಉದ್ಘಾಟಿಸಿದರು. ಸಮ್ಮೇಳನದ ಮೆರವಣಿಗೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿದರು.

ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಸಂಚಾಲಕ ತಾರನಾಥ ಸವಣೂರು ಪ್ರಸ್ತಾವನೆಗೈದರು. ಶಿಕ್ಷಕ ನಾರಾಯಣ ಕೆ. ಇರ್ದೆ ಸ್ವಾಗತಿಸಿ, ಹರಿಕಿರಣ್ ಕೊಲ ವಂದಿಸಿದರು. ಶಿಕ್ಷಕಿ ಯಶೋದಾ ನೆಟ್ಟಣಿಗೆ ಮುಡ್ನೂರು ಕಾರ್ಯಕ್ರಮ ನಿರೂಪಿಸಿದರು.