ಭವಿಷ್ಯದ ಜಗತ್ತನ್ನಾಳಬೇಕಾಗಿರುವ ಯುವ ಪೀಳಿಗೆ ಯೋಗಭ್ಯಾಸಿಗಳಾಗಿರಬೇಕು  

ದಾವಣಗೆರೆ ಜೂ.23:. ಚಿತ್ತ ಚಾಂಚಲ್ಯ, ಶಾರೀರಿಕ ಜಡತ್ವ  ಇಲ್ಲದವರು ಮಾತ್ರ ಉತ್ತಮ ನಾಯಕರಾಗಲು ಯೋಗ್ಯರು, ವಿಶ್ವ ನಾಯಕತ್ವ ವಹಿಸಬೇಕಾಗಿರುವ ಭಾರತದ ಯುವಪೀಳಿಗೆಯು ಯೋಗಭ್ಯಾಸಿಗಳಾಗಿ ದೇಹ ಮನಸ್ಸುಗಳ ಆರೋಗ್ಯ ಕಾಪಾಡಿಕೊಂಡಿರಬೇಕು ಎಂದು ಹಿರಿಯ ಪತ್ರಕರ್ತ,  ನಿರಂತರ ಯೋಗಾನುಷ್ಠಾನಿಎಚ್ ಬಿ ಮಂಜುನಾಥ್ ಕರೆಕೊಟ್ಟರು.ಅವರು ನಗರದ ಎಸ್ ನಿಜಲಿಂಗಪ್ಪ ಬಡಾವಣೆಯಲ್ಲಿರುವ ನ್ಯಾಷನಲ್ ಕಾನ್ವೆಂಟ್ ನಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಏರ್ಪಾಡಾಗಿದ್ದ ಕಾರ್ಯಕ್ರಮದ  ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಚಂಚಲ ಚಿತ್ತ ಮತ್ತು ಮನಸ್ಸಿನ  ಹೊಯ್ದಾಟವನ್ನು ಬುದ್ಧಿ ಮತ್ತು ಜ್ಞಾನದಿಂದ  ನಿಯಂತ್ರಿಸಬೇಕಾಗುತ್ತದೆ,  ಶಾರೀರಿಕ ಜಡತ್ವ ಮತ್ತು ಆಲಸ್ಯಗಳನ್ನು ಆಚಾರ ಮತ್ತು ಅನುಷ್ಠಾನಗಳಿಂದ  ನಿವಾರಿಸಬೇಕಾಗುತ್ತದೆ, ಇದಕ್ಕೆ ಸೂಕ್ತವಾದ ಸಾಧನವೆಂದರೆ ಸನಾತನ ಭಾರತೀಯವಾದ ಅಷ್ಟಾಂಗ ಯೋಗ, ಇದರಲ್ಲಿ ಆಸನವೂ ಒಂದು ಅಂಗವಾಗಿದ್ದು ಯಮ ನಿಯಮ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಸಮಾಧಿಗಳು ಉಳಿದ ಸಪ್ತ ಅಂಗಗಳಾಗಿವೆ. ಇವೆಲ್ಲವುದರ ಸೂಕ್ತ ಆಚರಣೆಯೇ ಯೋಗಭ್ಯಾಸವಾಗಿದ್ದು ಪ್ರಪಂಚದ ಎಲ್ಲ ಜೀವಿಗಳೂ ಒಂದೇ ಕುಟುಂಬದ ಸದಸ್ಯರು ಎಂಬ ವಿಶಾಲ ಭಾವನೆ ಅಷ್ಟಾಂಗ ಯೋಗಾಭ್ಯಾಸದಿಂದ ಪಡೆಯಲು ಸಾಧ್ಯವಿದ್ದು  “ಯೋಗ ಫಾರ್ ವಸುದೈವ ಕುಟುಂಬಕಂ” ಅಂದರೆ “ಇಡೀ ವಿಶ್ವವೇ ಒಂದು ಕುಟುಂಬದಂತೆ” ಎಂಬ ಈ ವರ್ಷದ ಯೋಗ ದಿನಾಚರಣೆಯ ಘೋಷಣೆಯು ಸಾಕಾರವಾಗುತ್ತದೆ ಎಂದು ಹೇಳಿದರು.   ಸಂಸ್ಥೆಯ ಕಾರ್ಯದರ್ಶಿ ಸಹನಾ ರವಿಯವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಬಾಯಿ ರುಚಿಯ ನಿಯಂತ್ರಣ, ಶಿಸ್ತು ಬದ್ಧ ಜೀವನ, ನಿಯಮ ಬದ್ಧ ವ್ಯವಹಾರ, ಕ್ರಮಬದ್ಧ ಉಸಿರಾಟ ಇವುಗಳಿಂದ ಆರೋಗ್ಯ ಹಾಗೂ ಆನಂದ ಪ್ರಾಪ್ತವಾಗುತ್ತದೆ ಇದೇ ಯೋಗ ಎಂದರು.ಸಂಸ್ಥೆಯ ಅಧ್ಯಕ್ಷ ರವಿ ಮುಖ್ಯೋಪಾಧ್ಯಾಯನಿ ಸಿಂಡ್ರೆಲ್ಲಾ ಅವರ ಉಪಸ್ಥಿತಿಯಲ್ಲಿ ಅಧ್ಯಾಪಕ ಜಾವೇದ್  ನಿರೂಪಿಸಿದ ಕಾರ್ಯಕ್ರಮದಲ್ಲಿ ಸಿಮರಾನ್ ಸ್ವಾಗತ  ಕೋರಿದರು.  ತ್ಯಾಗರಾಜ, ಸಂತೋಷ್ ಮುಂತಾಗಿ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದು ಸುಮಾ ವಂದನೆಗಳನ್ನು ಸಲ್ಲಿಸಿದರು. ಶಾಲೆಯ ಮಕ್ಕಳು ಸಾಮೂಹಿಕವಾಗಿ, ಶಿಸ್ತು ಬದ್ಧವಾಗಿ ಯೋಗಾಸನಗಳನ್ನು  ಮಾಡಿದರು.