ಭವಿಷ್ಯದಲ್ಲಿ ಸಾವಯುವ ಕೃಷಿಗೆ ಬಂಗಾರದ ಬೆಲೆ ರೈತರು ಸಾವಯುವ ಕೃಷಿಯತ್ತ ಒಲವು ತೋರಬೇಕು : ಶಾಸಕ ಲಕ್ಷ್ಮಣ ಸವದಿ

ಅಥಣಿ : ಡಿ.23:ಇತ್ತಿ?ಚಿನ ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಇದಕ್ಕೆ ಕಾರಣ ರೈತರು ಅಧಿಕ ಇಳುವರಿಯ ದುರಾಸೆಗೆ ಹೈಬ್ರಿಡ್ ಬೀಜ, ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸುತ್ತಿರುವುದರಿಂದ ಇಂದಿನ ಕೃಷಿ ಪದ್ಧತಿ ಅತ್ಯಂತ ಕಲುಷಿತವಾಗಿದ್ದು ಇಂತಹ ಕೃಷಿ ಉತ್ಪನ್ನಗಳನ್ನು ಸೇವಿಸುವ ನಾವೆಲ್ಲರೂ ಎಷ್ಟು ಆರೋಗ್ಯವಾಗಿದ್ದೇವೆ ಎಂದು ಪ್ರತಿಯೊಬ್ಬ ರೈತರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರೈತನಾಯಕ, ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಕಳವಳ ವ್ಯಕ್ತಪಡಿಸಿದರು.
ಅವರು ಅಥಣಿ ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಕೃಷಿ ಸಲಕರಣೆಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಕೃಷಿ ಪ್ರಧಾನವಾದ ದೇಶ, ಇಲ್ಲಿ ನಮ್ಮ ರೈತರು ಸದೃಢವಾಗಿದ್ದರೆ ಭಾರತ ಸದೃಢವಾಗಿರಲು ಸಾಧ್ಯ. ರೈತರು ಸದೃಢವಾಗಬೇಕಾದರೆ ಸೃಷ್ಟಿಕರ್ತ ಸಂಪತ್ತು ಎನಿಸಿಕೊಂಡಿರುವ ಮಣ್ಣಿನ ಫಲವತ್ತತೆಯನ್ನು ನಾವೆಲ್ಲರೂ ಸಂರಕ್ಷಣೆ ಮಾಡಿಕೊಳ್ಳಬೇಕು.. ಸರ್ಕಾರದ ಕೆಲವೊಂದು ತಪ್ಪಾದ ನೀತಿಗಳು ಮತ್ತು ಬೇಗನೆ ಶ್ರೀಮಂತನಾಗಬೇಕೆಂಬ ದುರಾಸೆಯಿಂದ ರೈತರು ಕೂಡ ತಾವೇ ಸಂಸ್ಕರಣೆ ಮಾಡುತ್ತಿದ್ದ ಬೀಜಗಳನ್ನು ಬಿಟ್ಟು ಈಗ ಹೈಬ್ರೆಡ್ ಬೀಜಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಮನೆಗಳಲ್ಲಿ ಎತ್ತುಗಳನ್ನು, ದನುಕರಗಳನ್ನು, ಸಾಕದೆ ಯಾಂತ್ರಿಕ ಬದುಕಿಗೆ ಹೊಂದಿಕೊಂಡು ಸಾವಯುವ ಕೃಷಿಯನ್ನು ಮರೆತು ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕ್ರೀಮಿನಾಶಕಗಳನ್ನು ಬಳಸಿ ಕಲುಷಿತ ಆಹಾರವನ್ನು ಬೆಳೆದು ಅದನ್ನೇ ತಾವು ಸೇವಿಸುವುದರ ಜೊತೆಗೆ ದೇಶಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಮುದೊಂದು ದಿನ ಜಿಲ್ಲೆಗೊಂದು, ತಾಲೂಕಿಗೊಂದು ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಬೇಕಾಗುತ್ತದೆ. ನಮ್ಮ ಆಹಾರ ಪದ್ಧತಿ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಅತ್ಯಧಿಕ ಜನರಲ್ಲಿ ಇಂದು ಕ್ಯಾನ್ಸರ್ ಕಾಯಿಲೆ ಕಂಡು ಬರುತ್ತದೆ. ಆದ್ದರಿಂದ ನಮ್ಮ ರೈತರು ಜಾಗೃತರಾಗಬೇಕು. ಕೃಷಿ ಅಧಿಕಾರಿಗಳು ಕೂಡ ಸಾವಯುವ ಕೃಷಿಯನ್ನು ಉತ್ತೇಜಿಸುವ ಮೂಲಕ ಕೃಷಿಯನ್ನು ಮತ್ತು ಕೃಷಿಕರನ್ನು ಆರೋಗ್ಯವಂತರನ್ನಾಗಿ ರೂಪಿಸಬೇಕು.
ಭವಿಷ್ಯದ ದಿನಗಳಲ್ಲಿ ಸಾವಯುವ ಕೃಷಿಗೆ ಬಂಗಾರದ ಬೆಲೆ ಬರಲಿದೆ. ವಿದೇಶಗಳಲ್ಲಿ ಸಾವಯುವ ಕೃಷಿಗೆ ಮತ್ತು ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ನಮ್ಮ ರೈತರು ಕೂಡ ಸಾವಯುವ ಕೃಷಿಯತ್ತ ಒಲವು ತರುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಬಬಲಾದಿ ಕಾಲಜ್ಞಾನರ ವಾಣಿಯಂತೆ ಹರಗುವವನಿಗೆ ಭಾರಾಅಣೆ, ಬರೆಯುವವನಿಗೆ ಚಾರಣೆ ಎಂಬಂತೆ ಸಾವಯುವ ಕೃಷಿಗೆ ಮತ್ತು ಉತ್ಪನ್ನಗಳಿಗೆ, ಸಿರಿಧಾನ್ಯ ಬೆಳೆಯುವವರಿಗೆ ಉತ್ತಮ ಭವಿಷ್ಯವಿದ್ದು. ರೈತರು ಮೊದಲು ತಾವು ಮತ್ತು ತಮ್ಮ ಕುಟುಂಬ ಆರೋಗ್ಯವಾಗಿರಲು ಸಾವಯುವ ಕೃಷಿಯನ್ನು ರೂಡಿಸಿಕೊಳ್ಳಬೇಕು, ತಾವೇ ಬೆಳೆದು ತಯಾರಿಸಿದ ತರಕಾರಿಗಳನ್ನು ಸೇವಿಸಬೇಕು. ಮನೆಯಲ್ಲಿ ದನುಕರುಗಳನ್ನು ಸಾಕುವ ಮೂಲಕ ಕೊಟ್ಟಿಗೆ ಗೊಬ್ಬರವನ್ನು ಸಂಗ್ರಹಿಸಿ ಬೆಳೆಗಳಿಗೆ ನೀಡಬೇಕು ಎಂದು ರೈತರಿಗೆ ಅನೇಕ ಸಲಹೆಗಳನ್ನು ನೀಡಿದರು.
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ ವಿಜ್ಞಾನ ತಂತ್ರಜ್ಞಾನ ಬೆಳದಂತೆ ಯಾಂತ್ರಿಕ ಕೃಷಿ ಅಧಿಕವಾಗಿದ್ದು, ದಿನನಿತ್ಯ ಓಡಾಡಲು ವಾಹನಗಳು ಕೂಡ ಅಧಿಕವಾಗಿರುವುದರಿಂದ ನಮ್ಮ ನಿಸರ್ಗ ಮತ್ತು ಕೃಷಿಯ ಮೇಲೆ ದುಷ್ಪರಿಣಾಮ ಬೀರಿದೆ. ಹವಾಮಾನ, ಮಳೆ ಮತ್ತು ಗಾಳಿ ಸಕಾಲಕ್ಕೆ ದೊರಕದ ಇರುವುದರಿಂದ ಬರಗಾಲದಂತ ಪರಿಸ್ಥಿತಿ ಎದುರಿಸಬೇಕಾಗಿದೆ. ಎಂದರು
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ರೈತರ ಭೂಮಿಗಳು ಮತ್ತು ಫಲವತ್ತಾದ ಮಣ್ಣು ಹಾಳಾಗದಂತೆ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅತಿಯಾದ ನೀರಿನ ಬಳಕೆಯಿಂದ ಸವಳು ಜವಳು ಸಮಸ್ಯೆ ಕಾಡುತ್ತದೆ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಫಲವತ್ತತೆ ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚು ಇಳುವರಿ ಹೊಂದಲು ಸಾಧ್ಯವಿದೆ. ಮಳೆ ನೀರಿನಿಂದ ಮಣ್ಣು ಕೊಚ್ಚಿ ಹೋಗದಂತೆ ರೈತರು ಅಲ್ಲಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವುದು ಬಹಳ ಅವಶ್ಯಕ. ಒಣ ಬೇಸಾಯ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಸರ್ಕಾರ ರೈತರ ಕೃಷಿ ಭೂಮಿ ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ಉದ್ದೇಶದಿಂದ ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಪ್ರಾಯೋಗಿಕ ಹಂತವಾಗಿ ತಾಲೂಕಿನ ತೇಲಸಂಗ, ಹಾಲಳ್ಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳ 4800 ಹೆಕ್ಟರ್ ಕೃಷಿ ಭೂಮಿಯನ್ನ ಆಯ್ಕೆ ಮಾಡಿಕೊಂಡು ಸು. 9 ಕೋಟಿ ರೂ ವೆಚ್ಚದಲ್ಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಅಳವಡಿಸಲಾಗುತ್ತಿದೆ. ನಂತರದ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳ ರೈತರಿಗೆ ಈ ಯೋಜನೆ ಒದಗಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ 5 ಲಕ್ಷ ರೂ ಪರಿಹಾರ ಧನ ದೃಢೀಕರಣ ಪತ್ರ ವಿತರಿಸಲಾಯಿತು, ಗ್ರಾಮೀಣ ಡಿಜಿಟಲ್ ಗ್ರಂಥಾಲಯಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಟ್ಯಾಬ್ ಗಳನ್ನು ವಿತರಿಸಲಾಯಿತು. ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಮಂಜೂರಾದ ಹನಿ ನೀರಾವರಿ ಸಲಕರಣೆಗಳನ್ನು ರೈತರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ವಾಣಿ ಯು, ಚಿಕ್ಕೋಡಿ ಸಹಾಯಕ ಜಂಟಿ ಕೃಷಿ ನಿರ್ದೇಶಕ ಎಚ್ ಡಿ ಕೊಳೇಕರ, ತಾ. ಪಂ. ಅಧಿಕಾರಿ ಶಿವಾನಂದ ಕಲ್ಲಾಪುರ, ಸಹಾಯಕ ಕೃಷಿ ನಿರ್ದೇಶಕ ನಿಂಗನಗೌಡ ಬಿರಾದಾರ,
ರೈತ ಮುಖಂಡರಾದ ಸಿ ಎಸ್ ನೇಮಗೌಡ, ಚಂದ್ರಕಾಂತ ಇಮ್ಮಡಿ, ಸುರೇಶ ಮಾಯಣ್ಣನವರ, ರಾಜೀವ ನಾಡಗೌಡ, ದುಂಡಪ್ಪ ಅಸ್ಕಿ, ರಾಮನಗೌಡ ಪಾಟೀಲ, ಮಹಾದೇವ ಮಡಿವಾಳ, ಕಲ್ಮೇಶ್ ಯಲ್ಲಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಚ್ ಡಿ ಕೋಳೆಕರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹಚಡದ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ವಂದಿಸಿದರು,


“ಕೇಂದ್ರ ಸರ್ಕಾರ ಎಥಿನಾಲ್ ಗೆ ಹೆಚ್ಚಿನ ದರ ನೀಡಲಿ”
ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲೂಕು ಅಥಣಿಯಾಗಿದ್ದು, ಪ್ರತಿ ವರ್ಷ 75 ಲಕ್ಷ ಟನ್ ಕಬ್ಬನ್ನು ನಮ್ಮ ರೈತರು ಉತ್ಪಾದಿಸುತ್ತಾರೆ. ಕಕಮರಿಯ ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆ ಮತ್ತು ಖೀಳೆಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆ ಬೇಗನೆ ಅನುಷ್ಠಾನಗೊಂಡರೆ ಸು. 200 ಲಕ್ಷ ಟನ್ ಕಬ್ಬು ಉತ್ಪಾದನೆಯಾಗಲಿದೆ. ಕಬ್ಬಿನ ಕಾರ್ಖಾನೆಗಳು ಎಥಿನಾಲ್ ತಯಾರಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಪ್ರತಿ ಲೀಟರ್ ಎಥೆನಾಲ ಗೆ 90 ರೂಪಾಯಿ ನೀಡಿದರೆ ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆಯಿಂದ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಥಿನಾಲ್ ದರ ಪುನರ್ ಪರಿಶೀಲನೆ ಮಾಡಬೇಕು.

  - ಲಕ್ಷ್ಮಣ ಸವದಿ. ಮಾಜಿ ಡಿಸಿಎಂ 
    ಹಾಗೂ ಶಾಸಕ ಅಥಣಿ. 

ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ನಮ್ಮೆಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ನಮ್ಮ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳದಿದ್ದರೆ ನಮ್ಮ ಮಕ್ಕಳಿಗೆ ಹಾಗೂ ಮುಂದಿನ ಜನಾಂಗಕ್ಕೆ ಭವಿಷ್ಯವಿಲ್ಲ. ಆದ್ದರಿಂದ ರೈತರು ಜಾಗೃತರಾಗಬೇಕು, ಸುಧಾರಿತ ಕೃಷಿಯನ್ನ ಜೀವನದಲ್ಲಿ ರೂಢಿಸಿಕೊಳ್ಳಬೇಕು,

         ರಾಜು ಕಾಗೆ. 
      ಶಾಸಕರು ಕಾಗವಾಡ