ಭವಿಷ್ಯದಲ್ಲಿ ತಂತ್ರಜ್ಞಾನದಿಂದ ವಿಫುಲ ಅವಕಾಶಗಳು ದೊರೆಯಲಿವೆ:ಡಾ.ವಿಲಾಸ ಕರ್ಜಿನ್ನಿ

ವಿಜಯಪುರ:ಮೇ.2: “ತಂತ್ರಜ್ಞಾನ & ಆಧುನೀಕರಣವು ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಇಂದಿನ ಪೀಳಿಗೆಯ ಪೈಪೋಟಿ ಎದುರಿಸಲು ತಂತ್ರಜ್ಞಾನದ ಅರಿವು, ಜ್ಞಾನ ಅವಶ್ಯವಾಗಿದೆ. ಭವಿಷ್ಯದಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ಸಾಕಷ್ಟು ಅವಕಾಶಗಳು ಇವೆ. ಇತ್ತೀಚೆಗೆ ಮುಂಬಯಿ ನಗರದಲ್ಲಿ ಸ್ಥಾಪನೆಯಾದ ಆ್ಯಪಲ್ ಕಂಪನಿಯಲ್ಲಿ ಬಿ.ಸಿ.ಎ. ಪೂರೈಸಿದವರೇ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ. ಭವಿಷ್ಯದಲ್ಲಿ ಜ್ಞಾನದ ಉನ್ನತೀಕರಣದಲ್ಲಿ ಕಂಪ್ಯೂಟರ್ ಜ್ಞಾನ ತುಂಬ ಉಪಯೋಗಕಾರಿಯಾಗಿದೆ” ಎಂದು ಕೊಲ್ಹಾಪುರ ತಾಂತ್ರಿಕ ಸಂಸ್ಥೆಯ, ಇಂಜಿನೀಯರಿಂಗ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಲಾಸ ವ್ಹಿ. ಕರ್ಜಿನ್ನಿ ಹೇಳಿದರು.
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯವು, ಬಿ.ಸಿ.ಎ. ವಿಭಾಗ ಮತ್ತು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಫ್ಯೂಚರಿಸ್ಟಿಕ್ ಟ್ರೆಂಡ್ಸ್ ಇನ್ ಇನ್‍ಫಾರ್ಮೇಶನ್ ಟೆಕ್ನಾಲಾಜಿ' ಎಂಬ ವಿಷಯದ ಕುರಿತುಒಂದು ದಿನದ ಅಂತರ್‍ರಾಷ್ಟ್ರೀಯ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಿದರು.
ಸಮಾವೇಶದಲ್ಲಿ ವಿಶೇಷ ಉಪನ್ಯಾಸ ನೀಡಿದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಡಾ.ಡಿ.ಟಿ.ಶಿರ್ಕೆ “ಈಗ ಇಡೀ ಜಗತ್ತನ್ನು ಆಳುತ್ತಿರುವುದೇ ತಂತ್ರಜ್ಞಾನ. ವಿಶ್ವವು ನಡೆದಿರುವುದೇ ತಂತ್ರಜ್ಞಾನದ ಸಹಾಯದಿಂದ. ಶಿಕ್ಷಣದಲ್ಲಿ ಕಂಡು ಬರುವ ಹೊಸ ಸಮಸ್ಯೆಗಳ ಪರಿಹರಿಸುವಲ್ಲಿ ನುರಿತು ಕಂಪ್ಯೂಟರ್ ತಂತ್ರಜ್ಞರ ಅವಶ್ಯಕತೆ ಇದೆ. ಅಂಥವರಿಂದ ವಿವಿಧ ಕ್ಷೇತ್ರಗಳ ತಾಂತ್ರಿಕ ತೊಂದರೆ ನಿವಾರಿಸಬಹುದು. ತಂತ್ರಜ್ಞಾನವಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ” ಎಂದರು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಜಿ.ರೋಡಗಿಯವರು “ಇಂದಿನ ಯುಗದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಬಳಕೆ ಪ್ರತೀ ಹೆಜ್ಜೆಯಲ್ಲಿಯೂ ಕಾಣುತ್ತೇವೆ. ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಬ್ಯಾಂಕಿಂಗ್, ವಿಮೆ, ಪ್ರವಾಸೋದ್ಯಮ ಮುಂತಾದ ಅನೇಕ ವಲಯಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಬಹುತೇಕ ರಾಷ್ಟ್ರಗಳು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿನ ಮಾಹಿತಿ ಹಾಗೂ ತಂತ್ರಜ್ಞಾನದ ವಿಷಯಗಳಿಂದ ಕಾರ್ಪೋರೇಟ ವಲಯವು ಸಾಕಷ್ಟು ಕೊಡುಗೆಯನ್ನು ನೀಡಿದೆ. ಭವಿಷ್ಯತ್ತಿನಲ್ಲಿ ಜಾಗತಿಕವಾಗಿ ಮಾಹಿತಿ ತಂತ್ರಜ್ಞಾನವು ಅತ್ಯಂತ ಪೂರಕವಾದ ಸೌಲಭ್ಯವಾಗಿ ಹೊರ ಹೊಮ್ಮಲಿದೆ” ಎಂದರು.
ಸಮಾವೇಶದ ಸಂಘಟನಾ ಸಹ ಕಾರ್ಯದರ್ಶಿಯಾದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ಕಬೀರ್ ಖರಾಡೆ ಮಾತನಾಡಿ “ತಂತ್ರಜ್ಞಾನದ ಬೆಳವಣಿಗೆಯು ಉತ್ತಮ ದೃಷ್ಟಿ ಕೋನವನ್ನು ಹೊಂದಿದೆ. ಅವನ್ನು ಸಾಕಾರಗೊಳಿಸಲು ಕಾರ್ಯ ಪ್ರವೃತ್ತರಾಗಬೇಕು. ಈ ಸಮಾವೇಶದಿಂದ ಬಿ.ಸಿ.ಎ., ಪಾಲಿಟೆಕ್ನಿಕ್, ಇಂಜಿನೀಯರಿಂಗ್ & ಬಿ.ಕಾಂ. ವಿದ್ಯಾರ್ಥಿಗಳಿಗೆ ಅತೀ ಉಪಯುಕ್ತವಾಗಿದ್ದು, ಇದರ ಯಶಸ್ವಿಗೆ ಕಾರಣರಾದ ಬಿ.ಎಲ್.ಡಿ.ಇ. ಸಂಸ್ಥೆಗೆ ಅಭಿನಂದನೆಗಳು. ಕೊಲ್ಹಾಪುರ ವಿಶ್ವವಿದ್ಯಾಲಯ ಮತ್ತು ಬಿ.ಎಲ್.ಡಿ.ಇ. ಸಂಸ್ಥೆಗಳ ನಡುವೆ ವಿದ್ಯಾರ್ಥಿ-ಅಧ್ಯಾಪಕರ ಜ್ಞಾನ ವಿನಿಮಯ ಮತ್ತು ಸಂಶೋಧನ ಸಾಂಸ್ಕøತಿಕ ಚಟುವಟಿಕೆಗಳು ಯಾವಾಗಲೂ ನಡೆಯುತ್ತಿರಲಿ” ಎಂದು ಆಶಿಸಿದರು.
ಸಮಾವೇಶದ ಸಮಾರೋಪದಲ್ಲಿ ಡಾ.ಫ.ಗು.ಹಳಕಟ್ಟಿ ಇಂಜಿನೀಯರಿಂಗ್ ಕಾಲೇಜಿನ ಎಸ್.ಓ.ಪಿ. ಕೋಶದ ಕಾರ್ಯನಿರ್ವಾಹಕ ಸಂಯೋಜಕ ಡಾ. ರಮೇಶ ಜೀರಗಾಳ, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ತಿಗಡಿ ತಂತ್ರಜ್ಞಾನದ ಅವಶ್ಯಕತೆ ಮತ್ತು ಉಪಯೋಗಗಳ ಬಗ್ಗೆ ಮಾತನಾಡಿದರು.
ವಿವಿಧ ರಾಜ್ಯ ಮತ್ತು ರಾಷ್ಟ್ರಗಳಿಂದ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ನೊಂದಣಿಯಾಗಿದ್ದು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಸೇರಿದಂತೆ 70 ಜನ ಸಂಶೋಧನ ಲೇಣಗಳನ್ನು ಮಂಡಿಸಿದರು. ಈ ಎಲ್ಲ ಲೇಖನಗಳನ್ನು ಅಂತರ್‍ರಾಷ್ಟ್ರೀಯ ಸ್ಕೋಪಸ್ ಜನರಲ್ ಹಾಗೂ ಐ.ಎಸ್.ಬಿ.ಎನ್. ಪುಸ್ತಕದಲ್ಲಿ ಪ್ರಕಟಿಸಲಾಗುವುದೆಂದು ಸಮಾವೇಶದ ಸಂಯೋಜಕಿ ಪ್ರೊ.ವೀಣಾ ಮೋರೆ ತಿಳಿಸಿದರು.
ಸಮಾವೇಶದಲ್ಲಿ ಹಿಂದಣ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಪ್ರೊ. ಎಸ್.ಜಿ.ತಾಳಿಕೋಟಿ, ವಿಶ್ರಾಂತ ಪ್ರಾಚಾರ್ಯ ಪ್ರೊ.ಎಮ್.ಎಸ್.ಝಳಕಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಐ.ಬಿ.ಚಿಪ್ಲಲಕಟ್ಟಿ, ಪ್ರೊ.ಪಿ.ಎಸ್.ತೋಳನೂರ, ಡಾ.ಭಾರತಿ ಮಠ, ಡಾ.ಮಹಾನಂದಾ ಪಾಟೀಲ, ಪ್ರೊ.ವಿಜಯಕುಮಾರ ತಳವಾರ, ಎಸ್.ಎ.ಪಾಟೀಲ, ಸದಾಶಿವ ನಾಗನೇಶ್ವರ, ಸರಸ್ವತಿ ಗೋನಾಳ, ಅಧೀಕ್ಷಕ ಎಸ್.ಪಿ.ಕನ್ನೂರ, ಐ.ಟಿ.ಮುಖ್ಯಸ್ಥ ಸತೀಶ ಮುರನಾಳ, ಶಿವಾನಂದ ಮಠಪತಿ, ಐಶ್ವರ್ಯ ಮಿರಜಕರ, ದಾನಮ್ಮ ಗಿಡವೀರ, ಅನ್ನಪೂರ್ಣ ತುಪ್ಪದ, ಶ್ರದ್ಧಾ ಕರಾಡೆ, ಅಶ್ವಿನಿ ಜಾಧವ, ತೇಜಸ್ವಿನಿ ಹಿಬಾರೆ, ರೇಣುಕಾ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಕುಮಾರಿ ಸೃಷ್ಟಿ ಪ್ರಥಮಶೆಟ್ಟಿ ಮತ್ತು ಭಾಗ್ಯಾ ಮಾಲಗತ್ತಿ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಪ್ರೊ.ಮಲ್ಲಿಕಾರ್ಜುನ ಜಿ.ಎಂ. ಸ್ವಾಗತಿಸಿದರು. ಪ್ರೊ.ಲಕ್ಷ್ಮೀ ಬಾಗಲಕೋಟ ಪರಿಚಯಿಸಿದರು. ಡಾ. ಭಕ್ತಿ ಮಹೀಂದ್ರಕರ್ ಮತ್ತು ಪ್ರೊ. ಸೋಮಶಂಕರ ಹಿರೇಮಠ ನಿರೂಪಿಸಿದರು. ಬಿ.ಸಿ.ಎ. ಮುಖ್ಯಸ್ಥೆ ವೀಣಾ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಭಾರತಿ ನಾಯಕವಾಡಿ ವಂದಿಸಿದರು.