ಭವಿಷ್ಯದಲ್ಲಿ ಆನ್ ಲೈನ್ ಶಿಕ್ಷಣ ಪರ್ಯಾಯವೇ ?

ದಾವಣಗೆರೆ.ಜೂ.೧೦; ದೇಶದಲ್ಲಿ ಮೊದಲನೆ ಅಲ್ಲೆ ಎರಡನೇ ಅಲೆ  ಎಂದು ಕೊರೋನಾ ವೈರಸ್  ಜನರ ಜೀವನವನ್ನೇ ಕೊಂದು ಹಾಕಿ ಬಿಟ್ಟಿದೆ ವಿಶ್ವದಾದ್ಯಂತ ಇದರ ದುಷ್ಪರಿಣಾಮಗಳನ್ನು ನಾವು ಎಲ್ಲಾ ಕ್ಷೇತ್ರಗಳಲ್ಲಿ     ನೋಡುತ್ತಿದ್ದೇವೆ  ಹಾಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ  ದೇಶದ  ಆರ್ಥಿಕ ವ್ಯವಸ್ಥೆಯಲ್ಲಿನ ಹಿಂಜರಿತಗಳು, ಉದ್ಯೋಗ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಏರುಪೇರುಗಳು, ಷೇರು ಮಾರುಕಟ್ಟೆಯಲ್ಲಿನ ಕುಸಿತ ಹೀಗೆ ಹಲವಾರು ಪರಿಣಾಮಗಳು ಎದ್ದು ಕಾಣುತ್ತಿವೆ. ಲಕ್ಷಾಂತರ ಜನ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿ ತಿರುಗುತ್ತಿರುವುದನ್ನು ನಾವು ಈಗಲೂ ಕಾಣುತ್ತಿದ್ದೇವೆ .

ಇವುಗಳೆಲ್ಲದರ ನಡುವೆ ಕೊರೊನ ನಮಗೆ  ಕೆಲವೊಂದು ಹೊಸ ತನ್ನ್ನು ಕಲಿಯಲು ನಮಗೆ ಅವಕಾಶ ಮಾಡಿಕೊಟ್ಟಿದೆ .  ಬಹಳ ಮುಖ್ಯವಾಗಿ ಮನೆಯಿಂದಲೇ ಕೆಲಸ ಮತ್ತುಆನ್‍ಲೈನ್ ಶಿಕ್ಷಣ.ಮನೆಯಿಂದಲೇ ಕೆಲಸ ಪದ್ದತಿಯಿಂದಾಗುವ ಅನುಕೂಲಗಳನ್ನು, ಮುಖ್ಯವಾಗಿ ಆರ್ಥಿಕ ಉಳಿಕೆ, ಪರಿಶೀಲಿಸಿ ಮುಂದಿನ ದಿನಗಳಲ್ಲಿ  work from home ಪದ್ದತಿಯನ್ನು ಶಾಶ್ವತವಾಗಿ ಅಳವಡಿಸಲು ಬಹುರಾಷ್ಟ್ರೀಯ ಕಂಪನಿಗಳು ಚಿಂತನೆ ನಡೆಸಿರಬಹುದು ಎಂದು ಹೇಳಿದರೆ ತಪ್ಪಾಗಲಾರದು .

ಪ್ರಸ್ತುತ ನಾವುಗಳು ಅನುಭವಿಸುತ್ತಿರುವ ಕಠಿಣ ಮತ್ತು ಅನಿಶ್ಚಿತ ಸಮಯದಲ್ಲಿ ಆನ್‍ಲೈನ್ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡಿದ್ದೇವೆ. ಈ ಪದ್ದತಿಯ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಆನ್‍ಲೈನ್ ಶಿಕ್ಷಣ ಪದ್ದತಿಯ ಅನುಕೂಲಗಳ ರುಚಿಯನ್ನು ಕೆಲವರು ಸವಿದಿದ್ದಾರೆ. ಸಾಂಪ್ರದಾಯಿಕ ಕ್ಲಾಸ್ ರೂಮ್ ಶಿಕ್ಷಣದಿಂದ ಹೊರಬರುವುದು ನಮಗೆ ಕಷ್ಟಕರವಾದಂತಹ ಸಂಗತಿ. ಆದರೂ ಆನ್‍ಲೈನ್ ಶಿಕ್ಷಣದ ಮಹತ್ವವನ್ನು ಅರಿಯುವುದು ಇಂದಿನ  ದಿನಮಾನಗಳಲ್ಲಿ    ಸಮಂಜಸವಾಗಿದೆ.ಇತ್ತೀಚಿನ ದಿನಗಳಲ್ಲಿ   ಆನ್‍ಲೈನ್ ಕಲಿಕೆ ಹೆಚ್ಚು ಹೆಚ್ಚು    ಅವಕಾಶಗಳನ್ನು ಹೊಂದಿದೆ. ಹಿಂದಿನ ದಿನಗಳಲ್ಲಿ ಸಾಂಪ್ರದಾಯಿಕ ಆನ್ ಕ್ಯಾಂಪಸ್ ಶಿಕ್ಷಣ ಮಾತ್ರವೇ ಕಲಿಕೆಯ ದಾರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರಿಗೆ ಹೈಸ್ಪೀಡ್ ಅಂತರ್ಜಾಲ ಸಂಪರ್ಕಗಳು ದೊರೆತಿರುವುದರಿಂದ, ಆನ್‍ಲೈನ್ ಶಿಕ್ಷಣ ಜನಪ್ರಿಯವಾಗುತ್ತಿದೆ ಮತ್ತು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಪರ್ಯಾಯ ವ್ಯವಸ್ಥೆಯಾಗಿ ಬೆಳೆಯುತ್ತಿದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಉತ್ತೇಜನ ನೀಡುವ ಪರಿಣಾಮಕಾರಿ ವಿಧಾನವಾಗಿದೆ. ಭಾರತದಲ್ಲಿ ಆನ್‍ಲೈನ್ ಶಿಕ್ಷಣ 2021 ಕ್ಕೆ ಸಂಬಂಧಿಸಿದಂತೆ ಕೆಪಿಎಂಜಿ ಮತ್ತು ಗೂಗಲ್ ಕಂಪನಿಯವರು ನೀಡಿರುವ ವರದಿ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಆನ್‍ಲೈನ್ ಶಿಕ್ಷಣ ಎಂಟು ಪಟ್ಟು ಬೆಳೆಯುವ ನಿರೀಕ್ಷೆಯನ್ನು ಹೊಂದಿದೆ. ಆನ್‍ಲೈನ್ ಶಿಕ್ಷಣದ ಪ್ರಯೋಜನವನ್ನು ಪಡೆಯುವವರ ಸಂಖೈ 2021 ರ ವೇಳೆಗೆ 9.5 ಮಿಲಿಯನ್ ಮುಟ್ಟುವ ಅಂದಾಜು ಮಾಡಲಾಗಿದೆ ( 2016 ರಲ್ಲಿ ಕೇವಲ 1.6 ಮಿಲಿಯನ್ಇತ್ತು ). ವಿಶೇಷವಾಗಿ ಸ್ನಾತಕೋತ್ತರ ಪದವಿಗಳಾದ ಎಂಬಿಎ ಮತ್ತು ಎಂಸಿಎ  ಇತರೆ ತಂತ್ರಜ್ಞಾನ ಆಧಾರಿತ ಕೋರ್ಸುಗಳಿಗೆ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿರುವವರು ಪ್ರವೇಶವನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ಪದವಿ ಮತ್ತು ಪದವಿಪೂರ್ವ ಶಿಕ್ಷಣಗಳಲ್ಲಿಯೂ ಸಹ ಜನಪ್ರಿಯವಾಗುವ ಲಕ್ಷಣಗಳು ಕಾಣುತ್ತಿವೆ.

ಆನ್‍ಲೈನ್ ಶಿಕ್ಷಣದ ಅನುಕೂಲಗಳು

ಆನ್‍ಲೈನ್ ಶಿಕ್ಷಣದ ನವನೀಯತೆ ( Flexibility ) ಎಲ್ಲರನ್ನೂ ಆಕರ್ಷಿಸಿದೆ. ಆನ್‍ಲೈನ್ ಶಿಕ್ಷಣದ ಮೂಲಕ, ಎಲ್ಲಿಂದಲಾದರೂ , ಯಾವಾಗ ಬೇಕಾದರೂ ಶಿಕ್ಷಣವನ್ನು ಪಡೆಯಬಹುದು. ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್ ಪೋನ್ ಜೊತೆಗೆ ಅಂತರ್ಜಾಲದ ವ್ಯವಸ್ಥೆಯಿದ್ದರೆ ಸಾಕು. ತರಗತಿಗಳಲ್ಲಿನ ಹಾಜರಾತಿ ತಲೆನೋವು ಇರುವುದಿಲ್ಲ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಅನುಸರಿಸಬಹುದು. ವಿಶೇಷವಾಗಿ ಉದ್ಯೋಗಿಗಳಿಗೆ, ಕೆಲಸವನ್ನು ಬಿಟ್ಟು ಕೊಡದೆ, ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ. ವಾರಾಂತ್ಯಗಳಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ. ಸಮಯ ನಿರ್ವಹಣೆ ಹಾಗೂ ಉದ್ಯೋಗ – ಶಿಕ್ಷಣ ಇವುಗಳ ಸಮತೋಲನವನ್ನು ಕಾಪಾಡುವ ಕೌಶಲ್ಯವನ್ನು ಕಲಿಸುತ್ತದೆ.ಕಲಿಯುವ ವೇಗ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ವ್ಯತ್ಯಾಸವಾಗುತ್ತದೆ. ಪ್ರತಿಯೊಬ್ಬರೂ ಒಂದೇ ವೇಗದಲ್ಲಿ ಕಲಿಯಲು ಸಾಧ್ಯವಿಲ್ಲ. ತರಗತಿಯ ಕೊಠಡಿಯಲ್ಲಿ ಎಲ್ಲರಿಗೂ ಒಟ್ಟಿಗೆ ಪಾಠಮಾಡುವಾಗ, ಅನೇಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸ ಬೇಕಾಗುತ್ತದೆ. ಹಲವು ಭಾರಿ ಇದು ಸಹ ಸಾಧ್ಯವಾಗದ ಪರಿಸ್ಥಿತಿಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಆನ್‍ಲೈನ್ ಶಿಕ್ಷಣ ಪರಿಹಾರ ನೀಡುತ್ತದೆ. ಈ ಪದ್ದತಿಯಲ್ಲಿ ಅಧ್ಯಯನಕ್ಕೆ ಸಂಬಂಧಪಟ್ಟ ಲೇಖನಗಳನ್ನು, ಪಠ್ಯಗಳನ್ನು ಮೊದಲೇ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಸಮಯದಲ್ಲಿ ಮತ್ತು ವೇಗದಲ್ಲಿ ಕಲಿಯಬಹುದು. ಆನ್‍ಲೈನ್ ಚಾಟ್ ಮೂಲಕ ತಮ್ಮ ಸಂದೇಹಗಳಿಗೆ ಸ್ಪಷ್ಟೀಕರಣಗಳನ್ನು ಪಡೆಯಬಹುದು.ಆನ್‍ಲೈನ್ ಶಿಕ್ಷಣದ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಕೋರ್ಸ್‍ಗಳ ವ್ಯಾಪಕ ಆಯ್ಕೆ ಸಾಧ್ಯವಾಗುತ್ತದೆ. ಜೊತೆಗೆ ಮನೆಯಲ್ಲಿ ಕುಳಿತು, ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿಗಳನ್ನು ನಾವು ಗಳಿಸಬಹುದು. 

ಅನಾನುಕೂಲಗಳು

ಆನ್‍ಲೈನ್ ಶಿಕ್ಷಣದಲ್ಲಿ ಕೆಲವು ಅನಾನುಕೂಲಗಳಿವೆ. ಉದಾಹರಣೆಗೆ ಆನ್‍ಲೈನ್ ಶಿಕ್ಷಣದಲ್ಲಿ ನವನೀಯತೆಯಿರುವುದರಿಂದ, ಪದವಿಯನ್ನು ಗಳಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಅವಕಾಶಗಳಿವೆ. ಪ್ರಾಧ್ಯಾಪಕರ ಮತ್ತು ಸಮಾನ ಮನಸ್ಕರ ನಡುವೆ ಮುಖಾಮುಖಿ ಸಂವಹನ ನಡೆಸುವ ಅವಕಾಶವಿರುವುದಿಲ್ಲ. ಇದರಿಂದ ಪೂರ್ಣ ಮಟ್ಟದ ಕಲಿಕೆ ಕುಂಠಿತವಾಗಬಹುದು. ಸಾಂಪ್ರದಾಯಿಕ ಆನ್‍ ಕ್ಯಾಂಪಸ್ ಶಿಕ್ಷಣದ ಜೀವನ ಶೈಲಿ, ಶಿಕ್ಷಣದ ಸಂಸ್ಥೆಗಳ ಕಲಿಕಾ ವಾತಾವರಣ, ಸಹ ಪಾಠಿಗಳ ಜೊತೆಯಲ್ಲಿ ಕಳೆಯಬಹುದಾದ ಆನಂದದ ಕ್ಷಣಗಳು ಆನ್‍ಲೈನ್ ಶಿಕ್ಷಣದಲ್ಲಿ ಲಭ್ಯವಿರುವುದಿಲ್ಲ.

ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕಾಗಿರುತ್ತದೆ. ಏಕೆಂದರೆ, ವಿದ್ಯಾರ್ಥಿಗಳು, ಪದವಿಯಲ್ಲಿ ಕಲಿಯುವ ವಿಷಯಗಳ ಬಗ್ಗೆ ಪ್ರಭುತ್ವವನ್ನು ಹೊಂದಿದ್ದಾರೆ ಎಂಬುವುದನ್ನು ದೂರದಿಂದಲೇ ಸಾಬೀತು ಪಡಿಸಬೇಕು. ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸ್ವತಂತ್ರ ಅಧ್ಯಯನವನ್ನು ಮಾಡಿರುವುದರಿಂದ, ಮಾನ್ಯತೆಯನ್ನು ಪಡೆದ ಮತ್ತು ಶ್ರೇಷ್ಠ ಮಟ್ಟದ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಹೆಚ್ಚು ಕಾಲ ಅಧ್ಯಯನದಲ್ಲಿ ತೊಡಗುವಂತೆ ನಿರ್ದೇಶನ ನೀಡಬಹುದು.ಪುಟ್ಟ ಮಕ್ಕಳ ಮನೋ ವಿಕಾಸಕ್ಕೆ ಈ ವ್ಯವಸ್ಥೆ ಅಷ್ಟೊಂದು ಅನುಕೂಲಕರವಲ್ಲ.

– ವೆಂಕಟೇಶ್ ಬಾಬು ಎಸ್, ದಾವಣಗೆರೆ