ಭವಾನಿ ಮಾತೆಗೆ ಅಪಾರವಾದ ಶಕ್ತಿಯಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ ನ.13: ತಾಯಿ ಭವಾನಿ ಮಾತೆಗೆ ಅಪಾರವಾದ ಶಕ್ತಿಯಿದೆ. ಯಾರ್ಯಾರ ಕೈಯಿಂದ ಯಾವ್ಯಾವ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು ಆ ಕೆಲಸ ಕಾರ್ಯಗಳನ್ನು ತಾಯಿ ಭವಾನಿ ಮಾತೆ ಮಾಡಿಸಿಕೊಳ್ಳುತ್ತಾಳೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮಂದಕನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ‘ನೂತನ ಜೈ ಭವಾನಿ ಮಾತಾ ಮಂದಿರದ ಶ್ರೀ ದುರ್ಗಾ ಭವಾನಿ ಮಾತಾ ಮೂರ್ತಿ ಹಾಗೂ ಮಹಾ ಶಿವಶರಣೆ ಶ್ರೀ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿಯ ಮಹಿಮೆ ದೊಡ್ಡದಿದೆ. ನಾವು ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳಬೇಕಾಗಿದೆ ಎಂದರು.

ನಾವೆಲ್ಲರೂ ಹೆಚ್ಚಾಗಿ ತುಳಜಾ ಭವಾನಿ ದೇವಿಗೆ ನೆಡೆದುಕೊಳ್ಳುತ್ತೇವೆ. ದಸರಾ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಪ್ರತಿಯೊಂದು ಕಡೆಗಳಲ್ಲಿ ತಾಯಿಯನ್ನು ವಿಶೇಷವಾಗಿ ಪೂಜಿಸಿ, ಆರಾಧಿಸಲಾಗುತ್ತದೆ. ಬೀದರ್ ಸೇರಿದಂತೆ ಈ ಭಾಗದಲ್ಲಿ ದಸರಾ ಸಂದರ್ಭದಲ್ಲಿ ತಾಯಿಯ ಘಟಸ್ಥಾಪನೆ ಮಾಡಲಾಗುತ್ತದೆ. ಬೀದರ್ ಬಿಟ್ಟರೆ ಬೇರೆ ಕಡೆಗಳಲ್ಲಿ ಈ ರೀತಿಯ ವಿಶೇಷತೆ ಕಾಣುವುದು ಕಡಿಮೆ.

ನಾನು ಭವಾನಿ ಮಾತೆಯ ಅಪ್ಪಟ ಭಕ್ತ, ಶಾಸಕನಾದರೇ ಸೈಕಲ್ ಮೂಲಕ ನಿನ್ನ ದರ್ಶನಕ್ಕೆ ಬರುತ್ತೇನೆಂದು ತಾಯಿ ಭವಾನಿ ಮಾತೆಗೆ ಹರಕೆ ಹೊತ್ತಿದ್ದೆ. ಅದರಂತೆ 2004ರಲ್ಲಿ ಬೀದರ್ ನಿಂದ ತುಳಜಾಪುರದ ತುಳಜಾ ಭವಾನಿ ದೇವಸ್ಥಾನಕ್ಕೆ ಸೈಕಲ್ ನಲ್ಲೇ ಹೋಗಿದ್ದೆ. ಬಳಿಕ 2008ರಲ್ಲಿ ಕೂಡ ಸೈಕಲ್ ನಲ್ಲೇ ಹೋಗಿದ್ದೆ. 2018ರಲ್ಲಿ ಮಂತ್ರಿಯಾಗಿ ಸೈಕಲ್ ನಲ್ಲೇ ಹೋಗಿದ್ದೇನೆ. ಸೈಕಲ್ ಹೇಗೆ ಹೋಯ್ತು ಎಂಬುದು ನನಗೆ ಗೋತ್ತಾಗಲಿಲ್ಲ. ಅಂಥ ದೊಡ್ಡ ಶಕ್ತಿ ಆ ತಾಯಿಗೆ ಇದೆ.

ಈ ಹಿಂದೆ ನಾನು ಕೊರೊನಾ ಬಂದು ಆಸ್ಪತ್ರೆ ಸೇರಿದ್ದೆ. ಆ ಸಂದರ್ಭದಲ್ಲಿ ತುಂಬಾ ಸಮಸ್ಯೆಯಾಗಿತ್ತು. ರಾತ್ರಿಯ ಸಂದರ್ಭದಲ್ಲೇ ತಾಯಿಯ ದರ್ಶನವನ್ನು ಆನ್ ಲೈನ್ ಮೂಲಕ ಪಡೆದುಕೊಂಡೆ. ನಾನು ಕೊರೊನಾದಿಂದ ಮುಕ್ತನಾಗಿ ಬಂದಿದ್ದಿನಿ ಎಂದರೇ ಆ ತಾಯಿಯ ಆಶೀರ್ವಾದವಿದೆ. ನಾವು ಶ್ರದ್ಧೆಯಿಂದ ನಡೆದುಕೊಳ್ಳುವ ಕೆಲಸ ಮಾಡಬೇಕಾಗಿದೆ. ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಅಭಿವೃದ್ಧಿ ಎಲ್ಲವನ್ನೂ ಕರುಣಿಸಲಿ ಎಂದು ನಾನು ತಾಯಿ ಭವಾನಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಪರಮಪೂಜ್ಯರಾದ ಡಾ. ರಾಜಶೇಖರ ಶಿವಾಚಾರ್ಯರು, ಅವಲಿಂಗೇಶ್ವರ ಶಿವಾಚಾರ್ಯರು, ಸಿದ್ದರೂಡ್ಢ ಮಠದ ಶ್ರೀಗಳು, ನಾಗಲಿಂಗ ಸ್ವಾಮೀಜಿ, ನಾಗಯ್ಯ ಸ್ವಾಮೀಜಿ ಬ್ಯಾಲಳ್ಳಿ, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಹಾಸ್ಯ ಕಲಾವಿದ ನವಲಿಂಗ ಪಾಟೀಲ್, ಮುಖಂಡರಾದ ವೈಜ್ಯನಾಥ, ಚನ್ನಪ್ಪ, ರಮೇಶ್, ಭಲವಂತ ಮಂದಕನಳ್ಳಿ, ಶರಣಪ್ಪ, ಸಂಜುಕುಮಾರ್ ಸೇರಿದಂತೆ ಅನೇಕರಿದ್ದರು.