ಭವಬಂಧನ ಕಳೆಯುವ ಶಕ್ತಿ ಸದ್ಗುರುವಿನಲ್ಲಿದೆ:ಹಣೇಗಾಂವ ಶ್ರೀಗಳು

ಬೀದರ:ಜ.11: ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾದ ಶ್ರೀ ರಾಚೋಟೇಶ್ವರ ದೇವಸ್ಥಾನದಲ್ಲಿ 11 ದಿನಗಳ ಶ್ರೀ ಸಿದ್ಧರಾಮೇಶ್ವರ ಜಯಂತಿ ಉತ್ಸವದ 9ನೇ ದಿನದ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಷ.ಬ್ರ.ಶಂಕರಲಿಂಗ ಶಿವಾಚಾರ್ಯರು ಹಣೆಗಾಂವ ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಪೂಜ್ಯ ಶ್ರೀ ಷ.ಬ್ರ.ಹಾವಗಿಲಿಂಗೇಶ್ವರ ಶಿವಾಚಾರ್ಯರಿಂದ ಭಕ್ತಿಯ ಸಂಭ್ರಮದ ಗಂಗಾರತಿ ಪೂಜೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯ ಶ್ರೀ ಷ.ಬ್ರ.ಶಂಕರಲಿಂಗ ಶಿವಾಚಾರ್ಯರು “ಶರಣರು ಹೇಳಿದಂತೆ ಒಬ್ಬ ವ್ಯಕ್ತಿ ತನ್ನ ತಲೆ ಮಾಸಿದರೆ ಸ್ನಾನ ಮಾಡುತ್ತಾನೆ, ಬಟ್ಟೆ ಮಾಸಿದಡೆ ಮಡಿವಾಳನಿಗೆ ಇಕ್ಕುವನು. ಆದರೆ ಮನುಷ್ಯ ತನ್ನ ಮನದ ಮೈಲಿಗೆ ತೊಳೆಯಬೇಕಾದರೆ ಶರಣರ, ಮಹಾತ್ಮರ, ಸದ್ಗುರುವಿನ ಗುಲಾಮನಾಗಿರಬೇಕಾಗುತ್ತದೆ. ಶಿಷ್ಯನ ಭವಬಂಧನ ಕಳೆಯುವ ಶಕ್ತಿ ಸದ್ಗುರುವಿನಲ್ಲಿದೆ ಎಂದರು. ಮುಂದೆ ಗುರಿ ಇದ್ದರೆ ಸಾಲದು, ಮುಂದೆ ಗುರುವಿನ ಆಶೀರ್ವಾದವೂ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೂಜ್ಯ ಶ್ರೀ ಷ.ಬ್ರ.ಹಾವಗಿಲಿಂಗೇಶ್ವರ ಶಿವಾಚಾರ್ಯರು ತಮ್ಮೆಲ್ಲರವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. ತನು ಮನ ಧನದಿಂದ ಗುರುವಿನ ಕೈ ಬಲಪಡಿಸಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ತಮ್ಮ ಆಶೀರ್ವಚನ ನೀಡಿದರು.

ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಷ.ಬ್ರ.ಬಸವಲಿಂಗ ಶಿವಾಚಾರ್ಯರು ಕವಳಾಸ್ ಅವರು ಮಾತನಾಡಿ “ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಸಿದ್ಧರಾಮೇಶ್ವರರ 8ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗುತ್ತಿದ್ದು, ತಾವುಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನ್ಮ ಸಾರ್ಥಕ ಮಾಡಿಕೊಂಡಿದ್ದೀರಿ. ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಬದುಕುವ ಕಲೆಯನ್ನು ರೂಢಿಸಿಕೊಂಡು ಈ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ಎಷ್ಟೋ ಜೀವರಾಶಿಗಳಲ್ಲಿ ತಿರುಗಿ ಬಂದು ಈಗ ಮನುಷ್ಯ ಜನ್ಮದಲ್ಲಿ ಹುಟ್ಟಿದ್ದೇವೆ. ಈ ಮಾನವ ಜನ್ಮ ವ್ಯರ್ಥ ಕಳೆಯುವುದು ಬೇಡ. ತನು ಮನ ಧನವನ್ನು ಗುರುಲಿಂಗ ಜಂಗಮಕ್ಕೆ ಸಮರ್ಪಿಸಿ ಪಾವನರಾಗಬೇಕು ಎಂದು ನುಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಷ.ಬ್ರ.ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ ಜನವರಿ 11 ರಂದು ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭ ಜರುಗಲಿದೆ. ಮುಂಡರಗಿಯ ಶ್ರೀ ಜಗದ್ಗುರು ಪೂಜ್ಯ ಶ್ರೀ ಅನ್ನದಾನೀಶ್ವರ ಶಿವಾಚಾರ್ಯರು ಪಾಲ್ಗೊಳ್ಳಲಿದ್ದಾರೆ. 108 ಜನ ಮಹಿಳೆಯರ ಕುಂಭ ಕಳಸ ಮೆರವಣಿಗೆಯೊಂದಿಗೆ ಅಂದು ಬೆ. 10 ಗಂಟೆಗೆ ಮೆರವಣಿಗೆ, ಅಭಿಷೇಕ, ಧರ್ಮಸಭೆ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳು ತಪ್ಪದೇ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ನುಡಿದರು.

ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ 9ನೇ ದಿನದ “ಜೀವನ ದರ್ಶನ ಪ್ರವಚನ”ವನ್ನು ಪೂಜ್ಯ ಶ್ರೀ ಶರಣಕುಮಾರ ಶಾಸ್ತ್ರಿಗಳು ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಪೂಜ್ಯ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಆಶೀರ್ವಚನ ನೀಡಿದರು.

ವೇದಿಕೆ ಮೇಲೆ ಸುದ್ದಿ ಸಮಯ ಜಿಲ್ಲಾ ವರದಿಗಾರರಾದ ಮಹಾರುದ್ರ ಡಾಕುಳಗೆ, ರೇಣುಕಾ ಮಾಹೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರಿಂದ ವಚನ ಗಾಯನ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ನಂತರ ಶ್ರೀಮಠದ ವತಿಯಿಂದ 2021ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.