
ಮತಬೇಟೆಗೆ ಕಸರತ್ತು
ಬೆಂಗಳೂರು, ಏ. ೨೪- ರಾಜ್ಯದ ವಿಧಾನಸಭಾ ಚುನಾವಣೆಯ ಪ್ರಚಾರ ಕಾವು ಏರುತ್ತಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರುಗಳು ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಚುನಾವಣಾ ಪ್ರಚಾರ ರಂಗೇರಿದೆ.ಈ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಮೂರು ಪಕ್ಷಗಳು ಎಲ್ಲೆಡೆ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದು, ಮೂರು ಪಕ್ಷಗಳ ಸ್ಟಾರ್ ಪ್ರಚಾರಕರುಗಳು ಇಂದಿನಿಂದ ಪ್ರಚಾರ ನಡೆಸಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮೈಸೂರಿಗೆ ಆಗಮಿಸಿ ಇಂದು ಮೈಸೂರು ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹಾಗೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೇಟೆ, ದೇವನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಪರ ಮತಯಾಚಿಸುವರು.
ಅಖಾಡಕ್ಕಿಳಿದ ದೇವೇಗೌಡರು
ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರದ ಅಖಾಡಕ್ಕೆ ಇಳಿದಿದ್ದು, ಇಂದು ತುಮಕೂರು ಜಿಲ್ಲೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವರು.
ಖರ್ಗೆ-ಪ್ರಿಯಾಂಕ ಪ್ರಚಾರ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದು, ಇಂದು ಚಿಕ್ಕಮಗಳೂರಿನಲ್ಲಿ ಅವರು ರೋಡ್‌ಶೋ ಮತ್ತು ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸುವರು.
ನಾಳೆ ಪ್ರಿಯಾಂಕ ಆಗಮನ
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಅವರು ನಾಳೆ ರಾಜ್ಯಕ್ಕೆ ಆಗಮಿಸಲಿದ್ದು, ಚಾಮರಾಜನಗರ ಮತ್ತು ಟಿ.ನರಸೀಪುರದಲ್ಲಿ ಕಾಂಗ್ರೆಸ್‌ನ ಪ್ರಚಾರ ಸಭೆಗಳಲ್ಲಿ ಭಾಗಿಯಾಗುವರು.ನಾಳೆ ಮಧ್ಯಾಹ್ನ ೧೨ ಗಂಟೆಗೆ ಟಿ. ನರಸೀಪುರದಲ್ಲಿ ಕಾಂಗ್ರೆಸ್ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುವ ಪ್ರಿಯಾಂಕ ಅವರು ೩ ಗಂಟೆಗೆ ಚಾಮರಾಜನಗರದ ಹನೂರು ಪಟ್ಟಣಕ್ಕೆ ಆಗಮಿಸಿ ಪ್ರಚಾರ ಸಭೆಯಲ್ಲಿ ಭಾಗಿಯಾಗುವರು. ನಂತರ ಅಲ್ಲೇ ಗಿರಿಜನ ಮಹಿಳೆಯರೊಂದಿಗೆ ಪ್ರಿಯಾಂಕ ಅವರು ಸಂವಾದ ನಡೆಸುವರು. ಬಳಿಕ ಕೆ. ಆರ್. ನಗರದಲ್ಲೂ ಅವರು ರೋಡ್‌ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಬಿಜಾಪುರದಲ್ಲಿ ರಾಹುಲ್
ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಈಗಾಗಲೇ ರಾಜ್ಯದಲ್ಲಿ ನಿನ್ನೆಯಿಂದಲೇ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದು, ಇಂದು ಬಿಜಾಪುರದಲ್ಲಿ ಅವರು ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದಾರೆ.
ಯಡಿಯೂರಪ್ಪ ಪ್ರಚಾರ
ಬಿಜೆಪಿಯ ಜನಪ್ರಿಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೋಟೆನಾಡು ಚಿತ್ರದುರ್ಗದಿಂದ ಬಿಜೆಪಿ ಪರ ಪ್ರಚಾರವನ್ನು ಆರಂಭಿಸಲಿದ್ದು, ಇಂದಿನಿಂದ ಅವರು ಬಿಡುವಿಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸುವರು.
ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಯಡಿಯೂರಪ್ಪನವರನ್ನು ಪ್ರಚಾರಕ್ಕೆ ಬರುವಂತೆ ದುಂಬಾಲು ಬಿದ್ದಿದ್ದು, ಯಡಿಯೂರಪ್ಪನವರು ಎಲ್ಲೆಡೆ ಪ್ರಚಾರ ನಡೆಸಲು ಅನುಕೂಲವಾಗುವಂತೆ ಬಿಜೆಪಿ ವಿಶೇಷ ಹೆಲಿಕ್ಯಾಪ್ಟರ್‌ನ್ನು ಯಡಿಯೂರಪ್ಪನವರ ಪ್ರಚಾರಕ್ಕೆ ವ್ಯವಸ್ಥೆ ಮಾಡಿದೆ.