ಭರವಸೆ ಈಡೇರಿಸಲು `ಕೈ’ ನಿರಾಸಕ್ತಿ : ಜೋಶಿ

ಹುಬ್ಬಳ್ಳಿ, ಮೇ 21: ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್‍ಗೆ ಆಸಕ್ತಿ ಇಲ್ಲ. ಚುನಾವಣೆ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಜನತೆಗೆ ಭರವಸೆಗಳನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.
ಬಿಜೆಪಿಯಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜೋಶಿ, ದುಡ್ಡು ಕಡಿಮೆ ಬಂದಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ ಕೇಂದ್ರದಿಂದ ಪ್ರತಿವರ್ಷ ಅನುದಾನ ಹಂಚಿಕೆಯನ್ನು ಹೆಚ್ಚಿಸುತ್ತಲೇ ಬರಲಾಗಿದೆ. ಇದನ್ನು ಮೊದಲು ಅವರು ತಿಳಿದುಕೊಳ್ಳಲಿ ಎಂದ ಅವರು, ಕಾಂಗ್ರೆಸ್ ಸುಳ್ಳು ಹೇಳುವ ಪಕ್ಷ ಎಂದು ಪ್ರಸಿದ್ಧಿ ಪಡೆದಿದೆ ಎಂದರು.
ನೀರಾವರಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಳಲ್ಲಿನ ಅಕ್ರಮಗಳ ಬಗ್ಗೆ ಯಾರೇ ಇರಲಿ ತನಿಖೆ ನಡೆಸಲಾಗುವುದು ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಆಡಳಿತ ಸಂದರ್ಭದಲ್ಲಿ ಅಕ್ರಮಗಳು ಏನೂ ನಡೆದಿಲ್ಲ. ಬೇಕಾದರೆ ಈ ಬಗ್ಗೆ ಅವರ ತನಿಖೆ ಮಾಡಲಿ ಎಂದು ಹೇಳಿದರು.