ಭಯ ಮುಕ್ತ, ನ್ಯಾಯ‌ಸಮ್ಮತ ಚುನಾವಣೆಗೆ ಸಹಕರಿಸಲು ಜಿಲ್ಲಾಧಿಕಾರಿ‌ ಎಂ.ಎಸ್.ದಿವಾಕರ್‌ ಮನವಿ


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.17 : ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮಾ. 16 ರಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ನಿಸ್ಪಕ್ಷಪಾತವಾಗಿ ಜರುಗಿಸಲು ಎಲ್ಲರೂ ಸಹಕರಿಸಬೇಕು ಎಂದು  ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮನವಿ ಮಾಡಿದರು.
ಹೊಸಪೇಟೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಏ.12ರಂದು ಅಧಿಸೂಚನೆ ಹೊರಡಿಸಲಾಗುವುದು. ಏ. 19 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಏ. 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.೨೨ ರಂದು ಸಂಜೆ ೭ ಗಂಟೆ ಒಳಗಾಗಿ ಉಮೇದುವಾರಿಕೆ ಹಿಂತೆಗೆದುಕೊಳ್ಳಬಹುದಾಗಿದೆ. ಮೇ 7ರಂದು ಬೆಳಗ್ಗೆ ೭ ರಿಂದ ಸಂಜೆ ೬ ಗಂಟೆ ವರೆಗೆ  ಮತದಾನ  ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಜೂನ್ 6ರಂದು ಚುನಾವಣೆ ಪ್ರಕ್ರಿಯೆಯು ಸಂಪೂರ್ಣ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ ಕ್ಷೇತ್ರಗಳು ಮತ್ತು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಸೇರಿ ಒಟ್ಟು 1234 ಮತಗಟ್ಟೆಗಳ ವ್ಯಾಪ್ತಿಯಲ್ಲಿ 5,57,385 ಪುರುಷರು ಹಾಗೂ 5,61,017 ಮಹಿಳೆಯರು ಮತ್ತು ಇತರೆ 141 ಸೇರಿ ಒಟ್ಟು 11,18,543 ಮತದಾರರು ಇದ್ದಾರೆ. 15,714 ಯುವಕರು ಮತ್ತು 13,282 ಯುವತಿಯರು ಮತ್ತು ಇತರೆ ಓರ್ವರು ಸೇರಿ ಒಟ್ಟು 28,997 18-19 ವಯೋಮಾನದ ಮತದಾರರು ಇದ್ದಾರೆ. 2456 ಪುರುಷರು ಮತ್ತು 4239 ಮಹಿಳೆಯರು ಸೇರಿ ಒಟ್ಟು 6695ರಷ್ಟು 80+ ವಯೋಮಾನದ ಮತದಾರರಿದ್ದಾರೆ. 8674 ಪುರುಷರು ಮತ್ತು 7184 ಮಹಿಳೆಯರು ಮತ್ತು ಇತರೆ ಐವರು ಸೇರಿ ಒಟ್ಟು 15,863 ವಿಕಲಚೇತನ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮತದಾರರ ಮಾಹಿತಿ ನೀಡಿದರು.
ಬಳ್ಳಾರಿ ಎಸ್.ಟಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 14 ಚೆಕ್ಪೋಸ್ಟ್ ಗಳನ್ನು  ಸ್ಥಾಪಿಸಲಾಗಿದೆ. ಪ್ರತಿ ಚೆಕ್ಪೋಸ್ಟ್ ನಲ್ಲಿ  ಮೂವರು ಸ್ಟ್ಯಾಟಿಕ್ ಸರ್ವೆಲನ್ಸ್ ತಂಡದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಅದರಂತೆ ಪ್ರತಿ ಮತಕ್ಷೇತ್ರಕ್ಕೆ ಎಫ್ಎಸ್ಸಿ ಕೂಡ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಉಪಸ್ಥಿತರಿದ್ದರು.