ಭಯ ಬಿಡಿ ನಿರಂತರ ಅಧ್ಯಯನ ಮಾಡಿ

ಕೋಲಾರ,ಡಿ,೨೯- ಪರೀಕ್ಷಾ ಭಯ ಬಿಡಿ, ನಿರಂತರ ಅಧ್ಯಯನದ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶದೊಂದಿಗೆ ಸಾಧಕರಾಗಿ ಹೊರಹೊಮ್ಮಿ ಜಿಲ್ಲೆಯ ಘನತೆ ಹೆಚ್ಚಿಸಿ ಎಂದು ವಿದ್ಯಾರ್ಥಿಗಳಿಗೆ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುಕನ್ಯಾ ಕರೆ ನೀಡಿದರು.
ಕೋಲಾರ-ಬಂಗಾರಪೇಟೆ ರಸ್ತೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರೇರಣಾ ಶಿಬಿರ ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆನೀಡಿ ಅವರು ಮಾತನಾಡುತ್ತಿದ್ದರು.
ಸಾಧನೆ ಸಾಧಕನ ಸ್ವತ್ತು ಅದು ಎಂದಿಗೂ ಸೋಮಾರಿಯ ಸ್ವತ್ತಲ್ಲ ಎಂಬುದನ್ನು ಅರಿಯಿರಿ, ಪರೀಕ್ಷೆ ಮುಗಿಯುವವರೆಗೂ ಪ್ರತಿ ಕ್ಷಣವೂ ಅಮೂಲ್ಯ ಎಂದು ತಿಳಿದು ಅಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿ,
ಈ ಬಾರಿ ಬಂಗಾರಪೇಟೆ ತಾಲ್ಲೂಕು ಫಲಿತಾಂಶ ಪಟ್ಟಿಯಲ್ಲಿ ಪ್ರಥಮ ಸ್ಥಾನ ಬರುವಂತಾಗಲು ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸಲು ಸೂಚಿಸಿದರು.
ಜಿಲ್ಲಾ ಪರೀಕ್ಷಾ ನೋಡಲ್ ಕೃಷ್ಣಪ್ಪ, ಅಗಣಿತ ವಿಷಯದ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಪರೀಕ್ಷಾ ಕೇಂದ್ರಗಳ ಪುನರಚನೆ ಮಾಡಲಾಗಿದೆ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಮಕ್ಕಳ ಅನುತ್ತೀರ್ಣತೆ ತಪ್ಪಿಸಲು ಮೂರು ಪರೀಕ್ಷೆ ನಡೆಸುತ್ತಿದೆ ಎಂದರು.
ಬಂಗಾರಪೇಟೆ ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿ ಸಿ.ಎಂ.ವೆಂಕಟರಮಣಪ್ಪ ಮಾತನಾಡಿ,ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಕೆಲವು ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಇದನ್ನು ತಡೆಯಲು ಹೊರಗೆ ಮಾಡಿದ ತಿಂಡಿ ತಿನ್ನದಿರಿ, ಮನೆ ಅಥವಾ ಶಾಲೆಯಲ್ಲಿ ಮಾಡಿದ ಬಿಸಿಯೂಟ ಸೇವಿಸಿ, ಶುದ್ದ ಕುಡಿಯುವ ನೀರು ಕುಡಿಯಲು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸೋಮಶೇಖರ್, ಅಶೋಕ ಕುಂದರಿಗೆ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಶಾಲೆಯ ಆಡಳಿತ ಅಧಿಕಾರಿ ಲಕ್ಷ್ಮೀನಾರಾಯಣ. ಮುಖ್ಯ ಶಿಕ್ಷಕರಾದ ಎಸ್.ಕೆ.ಸರೋಜಾ, ಯುವರಾಜ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಶಾಲೆಯ ನಾರಾಯಣಸ್ವಾಮಿ ಹಾಗೂ ಶಿಕ್ಷಕ ವರ್ಗ ಪುಷ್ಪ ಸ್ವಾಮಿ ವಿವೇಕಾನಂದ ಶಾಲೆಯ ಶಿವಣ್ಣ, ನರೇಂದ್ರನಾಥ್ ಪ್ರೌಢಶಾಲೆಯ ರೇವತಿ ಮತ್ತಿತರರಿದ್ದರು.
ಸಂವಾದದಲ್ಲಿ ಸರ್ಕಾರಿ ಪ್ರೌಢಶಾಲೆ ಹುದುಕುಳ, ಸರ್ಕಾರಿ ಪ್ರೌಢಶಾಲೆ ಎಸ್ ಮಾದಮಂಗಲ, ಕಾರ್ಯಪ್ಪ ಪ್ರೌಢಶಾಲೆ, ವಿವೇಕಾನಂದ ಪ್ರೌಢಶಾಲೆ ಲಕ್ಷ್ಮಿಪುರ, ನರೇಂದ್ರ ಪ್ರೌಢಶಾಲೆ ಮಾವಳ್ಳಿ ಈ ಶಾಲೆಗಳ ೪೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.