ವಾಷಿಂಗ್ಟನ್, ಜೂ.೨೩- ೯/೧೧ ಮತ್ತು ೨೬/೧೧ರ ಭಯೋತ್ಪಾದಕ ದಾಳಿಯ ನಂತರವೂ ಭಯೋತ್ಪಾದನೆ ಸಮಸ್ಯೆ ಜಾಗತಿಕ ಸಮುದಾಯಕ್ಕೆ ಸವಾಲಾಗಿ ಉಳಿದಿದೆ. ಈ ಪಿಡುಗಿನ ವಿರುದ್ದ ಎಲ್ಲರೂ ಒಗ್ಗೂಡಿ ಹೋರಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಭಯೋತ್ಪಾದನೆ ಪ್ರಾಯೋಜಿಸುವ, ಭಯೋತ್ಪಾದನೆ ಬೆಂಬಲಿಸುವ ದೇಶಗಳ ಜನರು ಸಮಾಜಗಳ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಸವಾಲು ಒಡ್ಡುತ್ತಲೇ ಬರುತ್ತಿದ್ದಾರೆ ಅವರ ವಿರುದ್ದ ಅತ್ಯಂತ ಕಟ್ಟುನಿಟ್ಟಾಗಿ ಮತ್ತು ದೃಢವಾಗಿ ನಿಲುವು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅಮೇರಿಕಾ ಸಂಸತ್ ಜಂಟಿ ಅಧಿವೇಶನವನ್ನು ಎರಡನೇ ಬಾರಿಗೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಈ ವಿಷಯ ತಿಳಿಸಿದ್ದಾರೆ. ಅಮೇರಿಕಾ ಸಂಸತ್‌ನಲ್ಲಿ ಎರಡು ಬಾರಿ ಭಾಷಣ ಮಾಡಿದ ವಿಶ್ವದ ಮೂರನೇ ನಾಯಕ ಎನ್ನುವ ಹಿರಿಮೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.
ಸುಮಾರು ಒಂದು ಗಂಟೆಗಳ ಅಮೇರಿಕಾ ಸಂಸತ್‌ನ ಜಂಟಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಯೋತ್ಪಾದನೆ ವಿರುದ್ದ ಅಂತರರಾಷ್ಟ್ರೀಯ ಸಮುದಾಯ ಒಗ್ಗೂಡಿ ಹೋರಾಟ ಮಾಡುವ ತುರ್ತು ಎದುರಾಗಿದೆ ಎಂದು ಅವರು ಪ್ರತಿಪಾದಿಸಿದರು.ತಂತ್ರಜ್ಞಾನದ ಸದುಪಯೋಗಕ್ಕಿಂತ ಹೆಚ್ಚಾಗಿ ಭಯತ್ಪಾದಕ ಸಂಘಟನೆಗಳು ದುರುಪಯೋಗ ಮಾಡಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಮನುಕುಲಕ್ಕೆ ಸವಾಲಾಗಿರುವ ಭಯೋತ್ಪಾದನಾ ಚಟುವಟಿಕೆಗೆ ಕೊನೆ ಹಾಡಲು ಶ್ರಮಿಸಬೇಕಾಗಿದೆ ಎಂದಿದ್ದಾರೆ.
ಅಮೇರಿಕಾ ಕೊಡುಗೆ ಅಪಾರ
ಭಾರತ ಮತ್ತು ಅಮೇರಿಕಾದ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಭಾರತೀಯ ಅಮೆರಿಕನ್ನರು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಅನಿವಾಸಿ ಭಾರತೀಯರನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು.ಅಮೇರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರು ಅಮೇರಿಕಾದ ಬೆಳವಣಿಗೆಯ ಜೊತೆಗೆ ಭಾರತದ ಸಮಗ್ರ ಪ್ರಗತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚಪ್ಪಾಳೆ, ಹರ್ಷೊದ್ಗಾರ ಸದ್ದು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೇರಿಕಾ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾಡಿದ ಸುಮಾರು ಒಂದು ಗಂಟೆಯ ಸುದೀರ್ಘ ಭಾಷಣದ ಸಮಯದಲ್ಲಿ ಅಮೆರಿಕದ ಸಂಸದು ಚಪ್ಪಾಳೆ ಸುರಿಮಳೆ ಸುರಿಸಿ,ಹರ್ಷೋದ್ಗಾರ ವ್ಯಕ್ತಪಡಿಸಿದರು.
ಮತ್ತೊಂದೆಡೆ ಅಮೇರಿಕಾದ ಕ್ಯಾಪಿಟಲ್‌ನಲ್ಲಿರುವ ಗ್ರ್ಯಾಂಡ್ ಹೌಸ್ ಚೇಂಬರ್‍ನಲ್ಲಿ ಭಾರತೀಯ ಸಮುದಾಯದ ಸದಸ್ಯರಿಂದ ’ಮೋದಿ, ಮೋದಿ’ ಎಂಬ ಘೋಷಣೆ ಕೂಗಿ ಜೈಕಾರ ಹಾಕಿದರು.