ಭಯೋತ್ಪಾದನೆ ರಾಜಕೀಯ ಅಸ್ತ್ರ: ಪಾಕ್ ವಿರುದ್ದ ಪ್ರಧಾನಿ ವಾಗ್ದಾಳಿ

ನ್ಯೂಯಾರ್ಕ್, ಸೆ.25- ಭಯೋತ್ಪಾದನೆ‌ಯನ್ನು ಪಾಕಿಸ್ತಾನ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎನ್ನುವ ಮೂಲಕ ಪಾಕ್ ನಡೆಯನ್ನು ಜಾಗತಿಕ ನಾಯಕರ ಮುಂದೆ ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ.

ಜಗತ್ತಿನಲ್ಲಿ ಹಿಂಜರಿಕೆಯ ಚಿಂತನೆ ಮತ್ತು ಉಗ್ರವಾದದ ಅಪಾಯ ಹೆಚ್ಚುತ್ತಿದೆ. ಇದರಿಂದಾಗಿ ಪಾಕಿಸ್ತಾನ ಭಯೋತ್ಪಾದನೆಯನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

2019 ರ ಬಳಿಕ ಕೋವಿಡ್ ಕಾಣಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧ ತಮ್ಮ ಭಾಷಣದುದ್ದಕ್ಕೂ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಸುವವರು ಭಯೋತ್ಪಾದನೆಯು ತಮಗೂ ಅಪಾಯಕಾರಿ ಎಂದು ತಿಳಿದಿರಬೇಕು” ಎಂದು ಹೇಳಿದ ಅವರು ವಿಶ್ಬಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ತನ್ನ ನೆಲದಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಗುಂಪುಗಳಿಗೆ ದೀರ್ಘ ಕಾಲದಿಂದ ಆಶ್ರಯ ನೀಡುತ್ತಿದೆ. ಈ ವಿಷಯವನ್ನು ಭಾರತ ಇದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ.

9/11 ದಾಳಿಯ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಅಡಗಿಕೊಂಡಿರುವುದು ಪತ್ತೆಯಾಗಿ ಹತ್ಯೆಯಾಗಿರುವುದು ಇದಕ್ಕೆ ಸಾಕ್ಷಿ. ಪಾಕಿಸ್ತಾನ ಭಾರತದೊಂದಿಗೆ ನಿಯಂತ್ರಣ ರೇಖೆಯ ಬಳಿ ಹಲವಾರು ಭಯೋತ್ಪಾದನಾ ಶಿಬಿರಗಳನ್ನು ಹೊಂದಿದೆ ಎಂದರು.

ಬಾಲಾಕೋಟ್ ನಲ್ಲಿ 2019 ರ ಫೆಬ್ರವರಿಯಲ್ಲಿ ಭಾರತೀಯ ವಾಯುದಾಳಿ ಉಗ್ರರ ಶಿಬಿರವನ್ನು ದ್ವಂಸ ಮಾಡಿದ್ದಾಗಿ ಹೇಳಿದ್ದಾರೆ.

ಜಂಟಿ ಹೋರಾಟಕ್ಕೆ ಕರೆ

ಭಯೋತ್ಪಾದನೆ ವಿರುದ್ಧ ಜಾಗತಿಕವಾಗಿ ಜಂಟಿ ಹೋರಾಟ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.

“ಅಫ್ಘಾನಿಸ್ತಾನದಲ್ಲಿ, ಅಲ್ಪಸಂಖ್ಯಾತರಿಗೆ ಸಹಾಯ ಬೇಕು. ನಾವು ನಮ್ಮ ಜವಾಬ್ದಾರಿ ಪೂರೈಸಬೇಕು … ಸಾಗರ ಸಂಪನ್ಮೂಲಗಳನ್ನು ಬಳಸಬಹುದೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಆದರೆ ಅವುಗಳನ್ನು ದುರ್ಬಳಕೆ ಮಾಡಬಾರದು ಮತ್ತು ಸಮುದ್ರ ವ್ಯಾಪಾರವನ್ನು ಮುಕ್ತವಾಗಿರಿಸಿಕೊಳ್ಳಬೇಕು” ಎಂದು. ಹೇಳಿದ್ದಾರೆ