‘ಭಯೋತ್ಪಾದನೆ ನಿರ್ಮೂಲನೆಗೆಕೇಂದ್ರ-ರಾಜ್ಯ ಗಮನ ಹರಿಸಿದೆ’


ಮಂಗಳೂರು, ನ.೨೪- ನಗರದ ನಾಗುರಿ ಬಳಿ ಸಂಭವಿಸಿದ್ದ ಆಟೋ ರಿಕ್ಷಾದಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸ್ ತನಿಖೆಯ ಜತೆ ಎನ್‌ಐಎ ಸೇರಿದಂತೆ ಕೇಂದ್ರ ತನಿಖಾ ತಂಡಗಳು ಸಹಕರಿಸುತ್ತಿವೆ. ಪ್ರಕರಣವನ್ನು ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಎನ್‌ಐಗೆ ಹಸ್ತಾಂತರಿಸುವ ಬಗ್ಗೆ ನಿರ್ಣಯವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸ್ಪೋಟ ಪ್ರಕರಣದ ಸ್ಥಳ, ಸಂತ್ರಸ್ತ ಹಾಗೂ ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ಪ್ರಕರಣದ ಸಂತ್ರಸ್ತ ಹಾಗೂ ಆಟೋ ಚಾಲಕ ಹಾಗೂ ಆರೋಪಿ ಶಾರೀಕ್ ನ ಆರೋಗ್ಯ ಸುಧಾರಣೆಗೆ ೮ ಮಂದಿ ತಜ್ಞ ವೈದ್ಯರ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರೋಪಿ ಗುಣಮುಖನಾದ ಮೇಲೆ ಹೆಚ್ಚಿನ ವಿಚಾರಣೆ ನಡೆಯಲಿದೆ. ಗಾಯಾಳು ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರಕಾರವೇ ಭರಿಸಲಿದೆ. ಅವರಿಗೆ ಸೂಕ್ತ ಆರ್ಥಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು. ಭಯಾನಕ ಘಟನೆಯೊಂದು ತಪ್ಪಿದೆ. ಆಕಸ್ಮಿಕವಾಗಿ ಆ ಜಾಗದಲ್ಲಿ ಸ್ಫೋಟ ಆಗಿದ್ದರಿಂದ ಬೆಂಕಿ ಮಾತ್ರ ಉಗುಳಿದೆ. ಬೇರೆಡೆ ಸಮರ್ಪಕ ರೀತಿಯಲ್ಲಿ ಸ್ಫೋಟ ಆಗಿದ್ದರೆ ಸಾಕಷ್ಟು ಭಯಾನಕ ಪರಿಸ್ಥಿತಿ ಉಂಟಾಗುತ್ತಿತ್ತು. ಭಯೋತ್ಪಾದನಾ ಕೃತ್ಯ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸಿದೆ. ಹಿಂದೆಲ್ಲಾ ಅಲ್ಲಲ್ಲಿ ನಡೆಯುತ್ತಿದ್ದ ಬಾಂಬ್ ಸ್ಫೋಟ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ದೇಶದ ಹಲವೆಡೆ ಸುತ್ತಾಡಿದ್ದಾನೆ. ಈ ಸಂಬಂಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ. ಆರೋಪಿಯ ಹಿನ್ನೆಲೆ, ಆತನಿಗೆ ಹಣಕಾಸಿನ ನೆರವು, ಆತನ ಹಿಂದೆಯಾರಿದ್ದಾರೆ ಎಂಬ ಎಲ್ಲಾ ನೆಲೆಯಲ್ಲೂ ಹಾಗೂ ಆರೋಪಿಗೆ ಸೂಕ್ತ ಶಿಕ್ಷೆ ಆಗೋ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು. ಆರೋಪಿಗಳು ಸ್ಥಳೀಯವಾಗಿ ಸಿಗೋ ವಸ್ತುಗಳನ್ನು ಜೋಡಿಸಿ ಬಾಂಬ್ ತಯಾರಿಸೋದ್ರಲ್ಲಿ ಪರಿಣಿತರು. ಈ ಎಲ್ಲಾ ಆಯಾಮದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರೋ ಮತಾಂಧ ಶಕ್ತಿಗಳನ್ನು ನಾವು ಮಟ್ಟ ಹಾಕಲಿದ್ದೇವೆ. ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ತನಿಖೆಯಲ್ಲಿ ಆರಂಭದಿಂದಲೂ ಜತೆಯಲ್ಲಿದ್ದಾರೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಈ ವೇಳೆ ಮಾತನಾಡಿದ ಡಿಜಿಪಿ ಪ್ರವೀಣ್ ಸೂದ್, ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುವುದು, ಸಮಾಜದಲ್ಲಿ ಶಾಂತಿಯನ್ನು ಕದಡುವುದು, ಸಾರ್ವಜನಿಕವಾಗಿ ಭಯ ಹುಟ್ಟಿಸುವುದು ಇಂತಹ ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರ ಪ್ರಮುಖ ಉದ್ದೇಶವಾಗಿರುತ್ತದೆ. ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಆತನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರಲಿದೆ. ಎನ್‌ಐಎ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆಗೆ ಆರಂಭದಿಂದಲೂ ಇವೆ. ಅಧಿಕೃತವಾಗಿ ಸದ್ಯದಲ್ಲೇ ಈ ಪ್ರಕರಣ ಎನ್‌ಐಎಗೆ ಹಸ್ತಾಂತರ ಆಗಲಿದೆ ಎಂದು ಅವರು ಹೇಳಿದರು. ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ನಡೆಯುತ್ತಿದೆ. ನಮ್ಮ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಮುಂದುವರಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಬಾಡಿಗೆ ನೀಡಿದವರನ್ನು ಸೇರಿದಂತೆ ಹಲವು ಜನರನ್ನ ವಶಕ್ಕೆ ಪಡೆಯುತ್ತೇವೆ. ಆದರೆ ಅವರು ಆರೋಪಿಗಳೇ ಆಗಿರಲ್ಲ. ವಿಚಾರಣೆಗೆ ಕರೆಸುತ್ತೇವೆ. ಆದರೆ ಮಾಧ್ಯಮದವರು ಅವರನ್ನು ಅಪರಾಧಿಗಳ ತರ ತೋರಿಸಬಾರದು ಎಂದು ಡಿಜಿಪಿ ಪ್ರವೀಣ್ ಸೂದ್ ಈ ಸಂದರ್ಭ ಮನವಿ ಮಾಡಿದರು. ಬೆಂಗಳೂರು ಸೇರಿ ಎಂಟು ಕಡೆ ದಾಳಿ ನಡೆಸಿ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಗೋಡೆಬರಹ ಪ್ರಕರಣದ ಬಳಿಕ ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದರೂ ಆತನ ಮೇಲೆ ನಿಗಾ ಇರಿಸದಿರುವುದು ಇಲಾಖೆಯ ವೈಫಲ್ಯವಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಆ ಸಂದರ್ಭದಲ್ಲೂ ಎಲ್ಲಾ ರೀತಿಯಲ್ಲೂ ತನಿಖೆಯ ಪ್ರಯತ್ನ ನಡೆದಿದೆ ಎಂದರು. ಆರೋಪಿಗಳಿಗೆ ಹಣಕಾಸಿನ ಮೂಲದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಅದರ ಬಗ್ಗೆ ಹೆಚ್ಚಿನದೇನೂ ಹೇಳಲಾಗದು. ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ಹಂತದಲ್ಲಿ ಏನೇ ಹೇಳಿದರೂ ತನಿಖೆಗೆ ಬಾಧಕವಾಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಡಿಜಿಪಿ ಪ್ರವೀಣ್ ಸೂದ್, ಐಜಿಪಿ ಚಂದ್ರಗುಪ್ತ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.