ಭಯೋತ್ಪಾದನೆ ಚಟುವಟಿಕೆಗೆ ಸಂಪೂರ್ಣ ಕಡಿವಾಣ-ಸಿಎಂ


ಚಿತ್ರದುರ್ಗ.ನ.೨೩;ಭಯೋತ್ಪಾದನೆ ಚಟುವಟಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಪೊಲೀಸರು 18 ಜನ ಸ್ಲೀಪರ್ ಸೆಲ್‍ಗಳ ಹೆಡೆಮುರಿ ಕಟ್ಟಿ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣದಲ್ಲಿಡುವ ಕೆಲಸ ಮಾಡಲಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
 ಹಿರಿಯೂರು ತಾಲ್ಲೂಕಿನ ವಿ.ವಿ. ಸಾಗರ ಜಲಾಶಯದಲ್ಲಿ  ಬಾಗಿನ ಅರ್ಪಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೊರ ರಾಜ್ಯದ ಸಂಪರ್ಕ ಇಟ್ಟುಕೊಂಡು ಕೆಲವರು ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದಾರೆ. ದೇಶದ ಸುರಕ್ಷತೆ ದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.  ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ಸೆರೆ ಸಿಕ್ಕ ಉಗ್ರನ ವಿವರಗಳನ್ನು 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ಇದರ ಹಿಂದೆ ಯಾವ ಅಂತರಾಷ್ಟ್ರೀಯ, ಅಥವಾ ರಾಷ್ಟ್ರೀಯ ಸಂಘಟನೆಗಳ ಬೆಂಬಲ ಇದೆ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುವುದು ಎಂದರು.ಸ್ವಾತಂತ್ರ ಬಂದು 75 ವರ್ಷಗಳ ಬಳಿಕ ಮೊದಲ ಬಾರಿಗೆ ವಿ.ವಿ.ಸಾಗರಕ್ಕೆ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ನನಗೆ ಒದಗಿ ಬಂದಿದೆ.  ಮೈಸೂರು ಒಡೆಯರ ಕಾಲದಲ್ಲಿ ನಿರ್ಮಿಸಿದ ಜಲಾಶಯ ಅತ್ಯಂತ ಭವ್ಯವಾಗಿದೆ. 89 ವರ್ಷಗಳ ಹಿಂದೆ ಜಲಾಶಯ ತುಂಬಿತ್ತು. ಜಲಾಶಯ ಮಧ್ಯ ಕರ್ನಾಟಕದ ನೀರಿನ ಜಾಲದ ಮುಖ್ಯ ಆಕರವಾಗಿದೆ. ಜಲಾಶಯ ತುಂಬಿಸುವ ಮೂಲಕ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಕುಡಿಯಲು ಹಾಗೂ ನೀರಾವರಿಗೆ ನೀರು ಒದಗಿಸಲು ಸಾಧ್ಯವಿದೆ. ವಿ.ವಿ.ಸಾಗರ ಜಲಾಶಯಕ್ಕೆ ಸತತವಾಗಿ ಭದ್ರಾ ನದಿಯ ನೀರನ್ನು ತುಂಬಿಸಿ ನೀರಿನ ಜಾಲವನ್ನು ಬಲಪಡಿಸಲಾಗುವುದು. ಜಲಾಶಯದ ಕೆಳಭಾಗದಲ್ಲಿ ಹನಿ ನೀರಾವರಿ ಜಾರಿಗೊಳಿಸಲಾಗಿದೆ. ಮಧ್ಯ ಕರ್ನಾಟಕ ಬರಡು ನಾಡು ಎಂಬ ಹಣೆಪಟ್ಟಿಯನ್ನು ತೊಡೆದುಹಾಕಿ, ಇದನ್ನು ಸಂಪತ್ ಭರಿತ ನಾಡನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.