ಭಯೋತ್ಪಾದಕರ ಪರವಾಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೋಗೆಯಿರಿ: ಎಸ್.ಬಾಲರಾಜ್ ಆಕ್ರೋಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ. 07- ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಚಾರ ಹಾಗೂ ಭಯೋತ್ಪಾದಕರ ಪರವಾದ ನಿಲುವು ಹೊಂದಿದ್ದು ಕೂಡಲೇ ವಜಾಗೊಳಿಸಬೇಕು ಎಂದು ಮಾಜಿ ಶಾಸಕ ಎಸ್. ಬಾಲರಾಜು, ಆಗ್ರಹಿಸಿದರು.
ಅವರು ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಹಿಂದೂ ಜಾಗರಣಾ ವೇದಿಕೆಯ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿಯಾಗಿದ್ದು, ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ರಕ್ಷಣೆ ಮಾಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿದರು.
ವಿಧಾನಸೌಧದ ಅವರಣದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ದ ಪ್ರಕರಣ ದಾಖಲು ಮಾಡಲು ಮೀನಾಮೇಷ ಎನ್ನಿಸುತ್ತಿರುವ ಸರ್ಕಾರ ರಾಜ್ಯ ಜನರ ಒತ್ತಾಯ ಜಾಸ್ತಿಯಾಗುತ್ತಿದ್ದಂತೆ ಮೇಲ್ನೋಟಕ್ಕೆ ಬಂಧಿಸಿದೆ. ಅಲ್ಲದೇ ಬೆಂಗಳೂರು ಬಾಂಬ್ ಸ್ಟೋಟಕ್ಕೆ ರಾಜ್ಯ ಸರ್ಕಾರದಲ್ಲಿರುವ ಜವಾಬ್ದಾರಿಯುತ ಮುಖ್ಯಮಂತ್ರಿಗಳು ಹಾಗು ಸಚಿವರು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿ, ತನಿಖೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರ ಇದ್ದಷ್ಟು ರಾಜ್ಯದ ಜನರಿಗೆ ಅನ್ಯಾಯವಾಗುತ್ತದೆ ಎಂದರು.
ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ಮಹೇಶ್ ಮಾತನಾಡಿ, ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಾಗಲು ರಾಜ್ಯ ಸರ್ಕಾರ ನಿಲುವು ಕಾರಣವಾಗಿದೆ. ಈಗಾಗಲೇ ದೇವಾಲಯದ ಹುಂಡಿಗಳಲ್ಲಿರುವ ಭಕ್ತರ ಹಣವನ್ನು ಮದರಸಗಳಿಗೆ ಬೇಕಾ ಬಿಟ್ಟಿ ಹಂಚಿಕೆ ಮಾಡುವ ಮೂಲಕ ಭಯೋತ್ಪಾದಕರನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿಗಳಾಗಿ ಮಾಡುತ್ತಿದ್ದಾರೆ. ಅಲ್ಲದೇ ಇಂಥ ದೇಶ ದ್ರೋಹಿಗಳನ್ನು ಜೈಲಿಗೆ ಕಳುಹಿಸುವ ಬದಲು ವಿಧಾನಸೌಧದ ಒಳಗೆ ಬಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿನ ಸಿಎಂ ಹಾಗೂ ಡಿಸಿಎಂಗೆ ಅವರ ಮತಗಳು ಬೇಕು. ಹೀಗಾಗಿ ದೇಶ ಹಾಗೂ ರಾಜ್ಯದ ಜನರು ಸತ್ತರು ಪರವಾಗಿಲ್ಲ ಎಂಬ ನಿಲುವು ಹೊಂದಿದೆ. ಮುಸ್ಲಿಂ ರಾಷ್ಟ್ರವಾನ್ನಗಿಸಲು ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ. ರಾಜ್ಯಸಭೆಗೆ ನಾಸೀರ್‍ಸಾಬ್ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆ. ಹೀಗಾಗಿ ತನಿಖೆ ಪೂರ್ಣಗೊಳ್ಳುವವರೆಗೆ ಪ್ರಮಾಣ ವಚನ ಸ್ವೀಕಾರ ಮಾಡದಂತೆ ತಡೆ ನೀಡಬೇಕು. ಈತನನ್ನು ಸಹ ಬಂಧಿಸಿ, ದೇಶವಿರೋಧಿಗಳಿಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಕಾರ್ಯಕರ್ತರು ಹಾಗೂ ಮುಖಂಡರು ಹಿಂದೂ ವಿರೋಧಿ ಹಾಗೂ ಭಯೋತ್ಪಾದಕರ ಪರವಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿರುದ್ದ ಘೋಷಣೆಗಳನ್ನು ಕೂಗಿದರು. ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಹಂಗಳ ಪ್ರಣಯ್, ಪಿ.ಬಿ. ಶಾಂತಮೂರ್ತಿ ಕುಲಗಾಣ, ಸುಂದರರಾಜ್, ಮಹೇಂದ್ರಕುಮಾರ್, ವಿಜಯ್, ಆರ್. ರಂಗಸ್ವಾಮಿ, ಕಾಡಹಳ್ಳಿ ಕುಮಾರ್, ಆರ್.ಎಂ. ಪುಟ್ಟಣ್ಣ, ನಂದೀಶ್ ಕೆಬ್ಬೇಪುರ, ಶಿವು ವಿರಾಟ್, ಸಿ.ಎಂ.ಶಿವರಾಜು, ಚಿಕ್ಕರಾಜು, ಚಂದ್ರಶೇಖರ್ ರಾವ್, ಸುರೇಶ್, ಮೊದಲಾದವರು ಇದ್ದರು.