ಭಯವಿಲ್ಲದೆ ಲಸಿಕೆ ಪಡೆಯಲು ಮುಂದಾಗಿ: ಓಲೇಕಾರ

ಹಾವೇರಿ:ಮಾ.14:ಕೋವಿಡ್ ಲಸಿಕೆ ಪಡೆದ ವ್ಯಕ್ತಿಗೆ ಯಾವುದೇ ತೊಂದರೆಗಳು ಉಂಟಾಗಿರುವುದಿಲ್ಲ. ಜಿಲ್ಲೆಯ ಜನತೆ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಲು ಮುಂದೆ ಬರಬೇಕು ಎಂದು ಹಾವೇರಿ ಕ್ಷೇತ್ರದ ಶಾಸಕರು ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ ಹೇಳಿದರು.
ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಕೋವಿಡ್ ಲಸಿಕೆ ( ಕೋವಿಶಿಲ್ಡ್ ಲಸಿಕೆ) ಪಡೆದ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕೋವಿಡ್ ಎರಡನೇ ಅಲೆ ಆರಂಭವಾಗಿದ್ದು, ಕೋವಿಡ್ ಲಸಿಕೆ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಕೋವಿಡ್ ಅಲೆ ತಡೆಯಲು ನಮ್ಮ ದೇಶದಿಂದ 46 ದೇಶಗಳಿಗೆ ವಾಕ್ಸಿನ್ ರಫ್ತುಮಾಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಕೋವಿಶಿಲ್ಡ್ ಲಸಿಕೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ಸ್‍ಗೆ ಲಸಿಕೆ ನೀಡಲಾಯಿತು. ಎರಡನೇ ಹಂತದಲ್ಲಿ 40 ರಿಂದ 60 ವರ್ಷದ ಆಯೋಗ್ಯವಂತರಿಗೆ ಲಸಿಕೆ ನೀಡಲಾಗುತ್ತಿದೆ. ಮದ್ಯಪಾನ ಹಾಗೂ ಮಾಂಸಹಾರಿಗಳು ವ್ಯಾಕ್ಸಿನ ತೆಗೆದುಕೊಂಡರೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಲಾಗಿದೆ. ಲಸಿಕೆ ನೀಡುವ ಮೊದಲು ವೈದ್ಯರು ನಿಮ್ಮ ಆರೋಗ್ಯವನ್ನು ಪರೀಕ್ಷಿಸಿ ಲಸಿಕೆ ನೀಡುವರು. ಲಸಿಕೆ ಪಡೆದ ನಂತರ 30 ನಿಮಿಷ ನಿಗಾ ವಹಿಸಲಾಗುವುದು ಹಾಗೂ ಲಸಿಕೆ ಪಡೆದ ಒಂದು ದಿನದ ನಂತರ ದೈನಂದಿನ ಚಟುವಟಿಕೆ ಕೈಗೊಳ್ಳಬಹುದು ಎಂದು ಹೇಳಿದರು.
ಆರೋಗ್ಯ ಇಲಾಖೆಯ 8509, ಕಂದಾಯ ಇಲಾಖೆಯ 292, ಪೊಲೀಸ್ ಇಲಾಖೆ 1773, ನಗರಸಭೆಯ 621, 60 ವರ್ಷ ಮೇಲ್ಪಟ್ಟ 1576 ಹಾಗೂ ಪಿ.ಆರ್.ಇ.ಡಿ.ಯ 621 ಹಾಗೂ 40 ರಿಂದ 59 ವರ್ಷದೊಳಗಿನ 420 ಜನರು ಸೇರಿ ಒಂಭತ್ತು ಸಾವಿರಕ್ಕಿಂತ ಅಧಿಕ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಹಾವೇರಿ ನಗರದ ವೀರಾಪುರ ಹಾಗೂ ಮಲ್ಲಾಡದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ರೂ.250 ದರ ನಿಗಧಿಪಡಿಸಲಾಗಿದ್ದು, ಸ್ಥಿತಿವಂತರು ಇಲ್ಲಿ ಲಸಿಕೆ ಪಡೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದರು. ಲಸಿಕೆ ಪಡೆಯಲು ತಮ್ಮ ಆಧಾರದ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ ತರಬೇಕು ಎಂದು ಹೇಳಿದರು.
ಬೆಂಗಳೂರು ಭಾಗದಲ್ಲಿ ಕೋವಿಡ್ ಎರಡನೇ ಅಲೆ ಅಧಿಕವಾಗಿದೆ. ಹಾಗಾಗಿ ಕೋವಿಡ್ ಲಸಿಕೆ ಪಡೆಯುವ ಮೂಲಕ ನಿಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾಸ್ಕ ಧಾರಣೆ ಎಲ್ಲರ ಜವಾಬ್ದಾರಿಯಾಗಿದೆ ಹಾಗೂ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ಪೂಜಾರ ಇತರರು ಉಪಸ್ಥಿತರಿದ್ದರು.