ಭಯಪಡೆದೇ ಕರೊನಾ ಲಸಿಕೆ ಹಾಕಿಸಿಕೊಳ್ಳಲು ಮನವಿ

ಗಂಗಾವತಿ, ಏ.04: ತಾಲೂಕಿನ ಡಣಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಪಂನಿಂದ ಹಮ್ಮಿಕೊಂಡಿದ್ದ 45 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಅವರು ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ದೇಶದಲ್ಲಿ ಕರೊನಾ ಎರಡನೇ ಅಲೆ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ವ್ಯಾಕ್ಸಿನ್‍ನಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಾರೊಬ್ಬರೂ ಭಯಪಡೆದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ನೀಲಾ ಸೂರ್ಯಕುಮಾರಿ ಮಾತನಾಡಿ, ಮೊದಲ ಹಂತದ ಕರೊನಾ ಅಲೆಯಿಂದ ದೇಶವೇ ತಲ್ಲಣಗೊಂಡು ಹಲವಾರು ಜನ ಸಾವಿಗೀಡಾಗಿದ್ದಾರೆ. ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಯಾರೊಬ್ಬರೂ ಹಿಂದೇಟು ಹಾಕಕೂಡದು. ವಿದ್ಯಾವಂತ ಯುವಕರು ಮನೆಯಲ್ಲಿ ಪಾಲಕರಿಗೆ ತಿಳಿಹೇಳಿ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ನಂತರ ತಾಪಂ ಇಒ ಡಾ.ಡಿ.ಮೋಹನ್, ತಾಪಂ ಸದಸ್ಯ ಬಿ.ಪಕೀರಪ್ಪ, ಪಿಡಿಒ ನೀಲಾ ಸೂರ್ಯಕುಮಾರಿ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಶರಣಪ್ಪ, ಮುಖಂಡರಾದ ಅಯ್ಯಪ್ಪ, ಮಲ್ಲನಗೌಡ, ಗ್ರಾಪಂ ಸದಸ್ಯರಾದ ಆನಂದ ರಥೋಡ್, ಹನುಮೇಶ ಡೊಳ್ಳು, ವೀರೇಶಗೌಡ, ಆರೋಗ್ಯ ಇಲಾಖೆಯ ಶರಣಬಸವ, ರಮ್ಯಾ ಇದ್ದರು.