ಕೋಲಾರ, ಜೂ. ೨೪: ಕಾಂಗ್ರೆಸ್ ಸರ್ಕಾರ ದ್ವೇಷದ ಆಡಳಿತ ನಡೆಸುತ್ತಿದೆ. ಬಿಜೆಪಿ ತಂದ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಟಿಪ್ಪು ಸಂತತಿ ಬೆಳೆಯಲು ಬಲವಂತದ ಮತಾಂತರ ನಿಷೇಧ ತೆಗೆದು ಹಾಕಲು ಮುಂದಾಗಿದೆ ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು.
ನಗರ ಹೊರವಲಯದ ರತ್ನ ಕನ್ವೆನ್ಷನ್ ಕಲ್ಯಾಣ ಮಂಟಪದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆಎಫ್‌ಡಿ, ಪಾಪ್ಯುಲರ್ ಫ್ರಂಟ್ ಮಾತು ಕೇಳಿಕೊಂಡು ರಾಜ್ಯವನ್ನು ಟಿಪ್ಪುಮಯವಾಗಿಸುವುದರ ಜತೆಗೆ ಮತಾಂತರ ನಿಷೇಧ ಕಾಯ್ದೆ ವಾಪಸ್ಸು, ಪಠ್ಯ ಪರಿಷ್ಕರಣೆ ಮೂಲಕ ಬಹುಸಂಖ್ಯಾತ ಹಿಂದೂಗಳಲ್ಲಿ ಅತಂತ್ರ, ಭಯದ ವಾತಾವರಣ ಸೃಷ್ಟಿಗೆ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
‘ಪಠ್ಯದಲ್ಲಿ ಸೂಲಿಬೆಲೆ ಅವರ ಚರಿತ್ರೆ ಬರೆದಿಲ್ಲ, ಭಗತ್ ಸಿಂಗ್ ಕಥೆ ಬರೆದಿದ್ದಾರೆ ಇಂತಹ ದೇಶ ಪ್ರೇಮಿಯ ಬದುಕಿನ ಪರಿಚಯ ಮಕ್ಕಳಿಗೆ ಬೇಡವೇ ಎಂದು ಪ್ರಶ್ನಿಸಿ, ಹೆಡ್ಗೇವಾರ್ ಅವರು ದೇಶ,ಧರ್ಮದ ಬಗ್ಗೆ ಹೇಳಿರುವುದನ್ನು ಜನರಿಗೆ ತಿಳಿಸುವುದು ತಪ್ಪೇ ಎಂದ ಅವರು, ಎಲ್ಲವೂ ಟಿಪ್ಪುಮಯವಾಗಿಸಲು ಕಾಂಗ್ರೆಸ್ ಹೊರಟಿದೆ, ಜನವಿರೋಧಿ ನೀತಿಗಳಿಂದ ಈ ಸರ್ಕಾರ ಅತಿ ಬೇಗ ಬಿದ್ದುಹೋಗುತ್ತದೆ. ಟಿಪ್ಪು ಡ್ರಾಪ್‌ನಿಂದ ಬಿದ್ದಾಗಲೇ ಇವರ ಮದ ಇಳಿಯುತ್ತದೆ’ ಎಂದು ಟೀಕಿಸಿದರು.
‘ಧರ್ಮವಿರೋಧಿ ಕೆಲಸ ಮಾಡುವ ಈ ಸರ್ಕಾರಕ್ಕೆ ಜನ ಬುದ್ಧಿ ಕಲಿಸುತ್ತಾರೆ. ನಾವೂ ಮತಾಂತರ ಕಾಯ್ದೆ ವಾಪಸ್ಸಿಗೆ ಅವಕಾಶ ನೀಡುವುದಿಲ್ಲ. ಸದನದ ಒಳಗೆ ಮತ್ತು ಹೊರಗೂ ಹೋರಾಟ ಮಾಡುತ್ತೇವೆ, ಇಷ್ಟರ ನಡುವೆ ಇವರ ಕಾಯ್ದೆ ರದ್ದಿಗೆ ಮುಂದಾದರೆ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷವೇ ಗ್ಯಾರಂಟಿ ಇರಲ್ಲ ’ ಎಂದರು.
‘ಬೇರೆ ಯಾವುದಾದರೂ ಬಿಜೆಪಿ ಅಧಿಕಾರ ಇರುವ ರಾಜ್ಯಕ್ಕೆ ಕೇಂದ್ರ ೧೦ ಕೆ.ಜಿ ಅಕ್ಕಿ ನೀಡಿದೆಯಾ, ಸಿದ್ದರಾಮಯ್ಯ ನಿಮ್ಮದೇನು ವಿಶೇಷ ಕ್ಯಾಟಗೆರಿಯೇ, ನಿಮಗೆ ಮಾತ್ರ ೧೦ ಕೆ.ಜಿ ನೀಡಲು ಎಂದು ಪ್ರಶ್ನಿಸಿ, ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡದಿರಿ’ ಎಂದು ತಿರುಗೇಟು ನೀಡಿದರು.
‘ಬಡವರಿಗೆ ಅಕ್ಕಿ ನೀಡುವ ಕಾಳಜಿ ಇದ್ದಿದ್ದರೆ ನಾಲ್ವರು ಸಚಿವರು ಹೋಗಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ನೀಡದೇ ಯಾರೋ ಗುಮಾಸ್ತನಿಗೆ ಅರ್ಜಿ ನೀಡಿದರಂತೆ ಅವರು ಇಲ್ಲ ಎಂದರಂತೆ’ ಎಂದು ವ್ಯಂಗ್ಯಮಾಡಿದರು.
‘ಕಾಂಗ್ರೆಸ್‌ನ ೫ ಗ್ಯಾರಂಟಿಗಳಲ್ಲಿ ‘ಹೇಳಿದ್ದೇನು-ಮಾಡಿದ್ದೇನು?’ ಎಂಬ ಶೀರ್ಷಿಕೆಯೊಂದಿಗೆ ರಾಜ್ಯದಾದ್ಯಂತ ೫ ತಂಡಗಳಲ್ಲಿ ಬಿಜೆಪಿ ಮುಖಂಡರು ಪ್ರವಾಸ ನಡೆಸಿ ಕೇಂದ್ರ ಯೋಜನೆಗಳನ್ನು ಜನರಿಗೆ ತಿಳಿಸುವುದರ ಜತೆಗೆ ಕಾಂಗ್ರೆಸ್‌ನ ನಿಜಬಣ್ಣ ಬಯಲಿಗೆ ತರಲಾಗುವುದು’ ಎಂದು ನುಡಿದರು.