ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಬದ್ಧತೆಯಿಂದ ಕಾರ್ಯನಿರ್ವಹಿಸಿ

ಚಿತ್ರದುರ್ಗ,ಸೆ.11:ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಹೇಳಿದರು.
 ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನಾ ಸಭೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಭದ್ರಾ ಮೇಲ್ದಂಡೆ ಯೋಜನೆಯು ಕಾಮಗಾರಿಯು ಬಹಳ ವರ್ಷಗಳಿಂದ ನಡೆಯುತ್ತಿದೆ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ನೀರಾವರಿ ಸಚಿವರು ಬದಲಾವಣೆಯಾದರೂ ಸಹ ಭದ್ರಾ ಮೇಲ್ದಂಡೆ ಯೋಜನೆ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿದಾಗ ಕಾಮಗಾರಿಗು ಸುಸೂತ್ರವಾಗಿ ಪೂರ್ಣಗೊಳ್ಳಲು ಸಾಧ್ಯ ಎಂದು ಹೇಳಿದರು.
ಅಧಿಕಾರಿಗಳು ಕೆಲಸಕ್ಕೆ ಬಂದು ಹೋಗುವುದಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ಏಳಿಗೆಗೆ ಏನಾದರೂ ಕೊಡುಗೆ ನೀಡಬೇಕು. ಅಧಿಕಾರಿಗಳು ಸಮಾಜಕ್ಕೆ ಬದ್ಧತೆಯನ್ನಿಟ್ಟುಕೊಂಡು ಜೀವನ ನಡೆಸಬೇಕು. ಬದ್ಧತೆ ಇಲ್ಲದ ವ್ಯಕ್ತಿಗಳನ್ನು ನಾನು ಸಹಿಸುವುದಿಲ್ಲ. ಇನ್ನೂ ಮುಂದೆ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಫ್ಲೋರೆಡ್‍ಯುಕ್ತ ನೀರು ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ಮೇಲೆ ನೀರಿಗೆ ಸಂಬಂಧಿಸಿದ ಖಾಯಿಲೆಗಳು ಹೆಚ್ಚಾಗುತ್ತಿವೆ. ನೀರು ನಮ್ಮ ದೇಹದ ಮೇಲೆ ತುಂಬಾ  ಪರಿಣಾಮ ಬೀರುತ್ತಿವೆ. ಬಹುತೇಕ ಖಾಯಿಲೆಗಳು  ನೀರಿನಿಂದಲೇ ಬರುತ್ತವೆ. ಒಂದು ಕಡೆ ಮನುಷ್ಯನ ದೇಹದ ಮೇಲೆ ನೀರು ಪರಿಣಾಮ ಬೀರಿದರೆ, ಮನುಷ್ಯನ ಬದುಕಿಗೆ, ಆ ದೇಶದ ಅರ್ಥಿಕ ಭವಿಷ್ಯತ್ತಿಗೆ ನೀರಾವರಿ ತುಂಬಾ ಮುಖ್ಯವಾದುದಾಗಿದೆ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಭದ್ರಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಅಧಿಕಾರಿಗಳು, ಇಂಜಿನಿಯರ್‍ಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.