ಭದ್ರಾ ಮೇಲ್ದಂಡೆ ಭೂ ಸ್ವಾಧೀನಕ್ಕೆ ನಮ್ಮವರೇ ಅಡ್ಡಿ; ಅಸಮಾಧಾನ

ಚಿತ್ರದುರ್ಗ.ಸೆ.೯; ಭದ್ರಾ ಮೇಲ್ದಂಡೆ ಭೂ ಸ್ವಾಧೀನಕ್ಕೆ ನಮ್ಮವರೇ ಅಡ್ಡಿಯಾಗಿದ್ದು ಹೋರಾಟ ಸಮಿತಿ ಹಾಗೂ ರೈತ ಸಂಘಟನೆಗಳು ಇಂತಹ ಅಡೆತಡೆಗಳ ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕೆಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
 ಇಲ್ಲಿನ ರೈತ ಭವನದಲ್ಲಿ ನೀರಾವರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ತರಿಕೆರೆ ತಾಲೂಕಿನ ಅಬ್ಬಿನಹೊಳಲು ಬಳಿ 1.9 ಕಿ.ಮೀ ಉದ್ದದ ಕಾಲುವೆ ನಿರ್ಮಾಣಕ್ಕೆ ಅಲ್ಲಿನ ರೈತರು ತಡೆ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರದುರ್ಗ ಜಿಲ್ಲೆಯವರೇ ಬೆಂಬಲ ಸೂಚಿಸಿದ್ದಾರೆ. ಪೊಲೀಸರ ಮೂಲಕ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ  ಪೂರ್ಣಗೊಳಿಸಬಹುದು. ಆದರೆ ಈ ತರಹದ ಪ್ರಯತ್ನಗಳು ಬೇಡ. ಸಂಘರ್ಷ ಒಳ್ಳೆಯದಲ್ಲ.ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ರೈತರ ಮನವೊಲಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ತಾವು ರೈತರೊಂದಿಗೆ ಮಾತುಕತೆ ನಡೆಸಿದ್ದು ಕಡೇಗಳಿಗೆಯಲ್ಲಿ ಅಡ್ಡಗಾಲು ಹಾಕಲಾಯಿತೆಂದರು.
ಅಬ್ಬಿನಹೊಳಲು ಹತ್ತಿರದ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೆ ಇಷ್ಟೊತ್ತಿಗೆ ಎರಡು ಮೋಟಾರು ಪಂಪುಗಳ ಚಾಲನೆ ಮಾಡಿ ವಿವಿ ಸಾಗರ ಜಲಾಶಯಕ್ಕೆ 125 ಅಡಿ ನೀರು ತುಂಬಿಸಬಹುದಿತ್ತು. ಇದು ಸಾಧ್ಯವಾಗದೇ ಹೋಗಿದೆ. ಈ ನೆಲದಲ್ಲಿ ಹುಟ್ಟಿದ ಎಲ್ಲರೂ ಈ ಬಗ್ಗೆ ಚಿಂತನೆ ನಡೆಸಬೇಕು. ಹೋರಾಟಗಳು ಮುಗಿದಿಲ್ಲ, ಇನ್ನೂ ಬಾಕಿ ಇದೆ ಎಂದು ಭಾವಿಸಬೇಕು. ನಮ್ಮವರಿಂದಲೇ ಎದುರಾಗುತ್ತಿರುವ ತೊಡರುಗಾಲುಗಳ ಬಗ್ಗೆ ಎಚ್ಚರವಹಿಸಬೇಕೆಂದು ನಾರಾಯಣಸ್ವಾಮಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಜನರ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿ ವಿವಿ ಸಾಗರಕ್ಕೆ ನೀರು ಹರಿದು ಬಂದಿದೆ. ತಾವು ಎಲ್ಲಿಯೂ ನಾನೇ ನೀರು ತಂದೆ ಎಂದು ಹೇಳಿಲ್ಲ. ಅದು ಮೂರ್ಖ ತನವಾಗುತ್ತದೆ.  ಸ್ಥಗಿತಗೊಂಡಿದ್ದ ಅಜ್ಜಂಪುರ ಅಂಡರ್್ಪಾಸ್ ಕಾಮಗಾರಿ ಚುರುಕುಗೊಳಿಸಿ ಪೂರ್ಣಗೊಳಿಸಲಾಯಿತು. ಇದಕ್ಕೆ ಹಿಂದಿನ ರೇಲ್ವೆ ಸಚಿವ ಸುರೇಶ್್ ಅಂಗಡಿಯ ಶ್ರಮ ನೆನೆಯಲೇ ಬೇಕು.ಅವರು ಸಹಾಯ ಮಾಡದಿದ್ದರೆ ಅಂಡರ್್ ಪಾಸ್ ಕಾಮಗಾರಿ ವಿಳಂಬವಾಗುತ್ತಿತ್ತು ಎಂದರು.
 ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವುದೂ ಸೇರಿದಂತೆ ಕಾಮಗಾರಿ ಪ್ರಗತಿ ಬಗ್ಗೆ ಚರ್ಚಿಸಲು ಗುರುವಾರ ಸಭೆ ಕರೆಯಲಾಗಿದೆ. . ಚಿತ್ರದುರ್ಗ ಜಿಲ್ಲೆಯ ಜನ ತಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ಸಚಿವನನ್ನಾಗಿ ಮಾಡಿದ್ದಾರೆ. ಅವರ ಋಣ ತೀರಿಸುತ್ತೇನೆ. ರಾಷ್ಟ್ರೀಯ ಯೋಜನೆಯಾಗಲು ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವುದಾಗಿ ನಾರಾಯಣಸ್ವಾಮಿ ಹೇಳಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿ ಅಜ್ಜಂಪುರ ರೇಲ್ವೆ ಅಂಡರ್ ್ಪಾಸ್ ಕಾಮಗಾರಿ ಪೂರ್ಣಗೊಳಿಸಲು ನಾರಾಯಣಸ್ವಾಮಿ ಮಾಡಿದ ಹಠ
ಹೋರಾಟಗಾರರಲ್ಲಿ ಸ್ವೂರ್ತಿಗೆ ಕಾರಣವಾಗಿತ್ತು. ಚಿತ್ರದುರ್ಗ ಜಿಲ್ಲೆಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ಹಲವು ಕೆಲಸಗಳು ಬಾಕಿ ಉಳಿದಿವೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ವಿನಂತಿಸಿದರು.