ಭದ್ರಾ ನೀರಿಗಾಗಿ ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಜ.೧೦: ಭದ್ರಾ ನೀರು ನಮ್ಮ ಹಕ್ಕು ಎನ್ನುವ ಘೋಷಣೆಯೊಂದಿಗೆ ಭದ್ರಾ ಅಚ್ಚುಕಟ್ಟು ಕೊನೆಯ ದಾವಣಗೆರೆ ಭಾಗದ ರೈತರಿಗೆ ನೀರನ್ನು ೭೪ ದಿನಗಳ ಕಾಲ ಹರಿಸುವಂತೆ ಆಗ್ರಹಿಸಿ ದಾವಣಗೆರೆ ಕೊನೆಭಾಗದ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿಭಟನೆ ನಡೆಸಿದರು.ನಗರದ ಹಳೇ ಪಿಬಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾಗಿ ತಹಶಿಲ್ದಾರರ ಕಚೇರಿ ತಲುಪಿ ತಕ್ಷಣವೇ ಕಾಡಾ ಸಮಿತಿ ತನ್ನ ಆದೇಶವನ್ನು ಹಿಂಪಡೆದು ದಾವಣಗೆರೆ ಭಾಗದ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್.ಲಿಂಗರಾಜ, ದಾವಣಗೆರೆ ಜಿಲ್ಲೆಯ ಕೊನೆ ಭಾಗಕ್ಕೆ ತಿಂಗಳಿಗೆ ಒಂದು ಸಲವಾದರೂ ನೀರು ತಲುಪದಿದ್ದರೆ ಜಿಲ್ಲೆಯ ಬೋರ್ ವೆಲ್ ಗಳು ಸಂಪೂರ್ಣ ಫೇಲ್ ಆಗುತ್ತವೆ. ಇದರಿಂದ ತೋಟಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆಗಬಹುದು.ಭದ್ರಾ ನೀರು ನಮ್ಮ ಹಕ್ಕು. ಡ್ಯಾಂನಲ್ಲಿ ನೀರು ಇದೆ ಕೊಡಿ ಎಂದು ಕೇಳುತ್ತಿದ್ದೇವೆ. ಆದ್ದರಿಂದ ರೈತರು ಎಚ್ಚರಗೊಳ್ಳಬೇಕೆಂದರು.ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ಜನವರಿ ೨೦ ರಿಂದ ೧೨ ದಿನ ನೀರು ಹರಿಸುವುದು ಮತ್ತು ೨೦ ದಿನ ನಿಲ್ಲಿಸುವುದು ಎಂಬ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಬಹಳ ಅನ್ಯಾಯವಾಗುತ್ತದೆ ಎಂದು ಹೇಳಿದರು.ಕೇವಲ ೧೨ ದಿನ ನೀರು ಹರಿಸಿದರೆ ದಾವಣಗೆರೆ ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ ಪ್ರತಿ ದಿನ ಎಡ ಮತ್ತು ಬಲದಂಡೆಗಳಿಗೆ ನೀರು ಬಿಡಲು ೦.೨೯ ಟಿ.ಎಂ.ಸಿ ನೀರು ಬೇಕಾಗುತ್ತದೆ. ಈಗ ಡ್ಯಾಂನಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ ತೆಗೆದು ಬಳಕೆಗೆ ಬರುವ ನೀರು ೨೧.೫೪ ಟಿ.ಎಂ.ಸಿ ನೀರು ಇದೆ. ಇದನ್ನು ಪ್ರತಿ ದಿನ ೦.೨೯ ರಂತೆ ೭೪ ದಿನ ಹರಿಸಬಹುದು ಎಂದು ಮಾಹಿತಿ ನೀಡಿದರು.ಆದರೆ ಅಧಿಕಾರಿಗಳು ೬.೯೦ ಟಿ.ಎಂ.ಸಿ ನೀರನ್ನು ಕುಡಿಯುವ ನೀರಿಗೆ-ಕೈಗಾರಿಕೆಗಳಿಗೆಂದು ಮತ್ತು ಅವಿಯಾಗುವ ನೀರು ೧.೯೧ ಟಿ.ಎಂ.ಸಿ ಎಂದು ಮೀಸಲಿಟ್ಟು ಲೆಕ್ಕ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ನಾಲೆಯಲ್ಲಿ ನೀರು ಬಿಟ್ಟ ಉದಾಹರಣೆ ಡ್ಯಾಂ ಇತಿಹಾಸದಲ್ಲೇ ಇಲ್ಲ ಎಂದರು.ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ, ದಾವಣಗೆರೆಯ ಟಿವಿ ಸ್ಟೇಷನ್ ಕೆರೆ, ಕುಂದುವಾಡದ ಕೆರೆ ಇನ್ನಿತರ ಕೆರೆಗಳಿಗೆ ತುಂಬಿಸಿಕೊಳ್ಳಬಹುದು. ಆದ್ದರಿಂದ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ. ೧.೯೧ ಟಿ.ಎಂ.ಸಿ ನೀರು ಅವಿಯಾಗುತ್ತದೆ ಎಂದು ಲೆಕ್ಕ ಹಾಕಿರುವುದು ತಲೆ ಬುಡವಿಲ್ಲದ ಲೆಕ್ಕಾಚಾರ. ಇದು ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಎಂದು ಕಿಡಿಕಾರಿದರು.ಆವಿಯಾಗುವ ನೀರನ್ನು ಲೆಕ್ಕ ಹಾಕುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಡ್ಯಾಂಗೆ ಬರುವ ಒಳಹರಿವಿನ ಪ್ರಮಾಣ ಲೆಕ್ಕ ಮಾಡಿಲ್ಲ. ಇದನ್ನು ಮುಚ್ಚಿಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಹರಿಸುವ ಎಡದಂಡೆಗೆ ಪ್ರತ್ಯೇಕ ವೇಳಾಪಟ್ಟಿ ನಿಗದಿ ಮಾಡಿದ್ದು, ಜನವರಿ ೧೦ ರಿಂದಲೇ ೧೬ ದಿನ ನೀರು ಹರಿಸುವುದು ಮತ್ತು ೧೫ ದಿನ ನಿಲ್ಲಿಸುವುದು ಎಂದು ನಿರ್ಣಯಿಸಲಾಗಿದೆ. ಎಡದಂಡೆಗೆ ಮತ್ತು ಬಲದಂಡೆಗೆ ಬೇರೆ ಬೇರೆ ವೇಳಾಪಟ್ಟಿ ಪ್ರಕಟಣೆ ಮಾಡಿರುವುದು ಡ್ಯಾಂನ ಇತಿಹಾಸದಲ್ಲಿಯೇ ಇದೇ ಮೊದಲು ಎಂದರು.
ಮುಖಂಡ ಕೆ.ಬಿ ಕೊಟ್ರೇಶ್ ಮಾತನಾಡಿ ದಾವಣಗೆರೆ ಜಿಲ್ಲೆ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ನೀರು ಹರಿಸಿ ಅಡಿಕೆ, ತೆಂಗು ಇನ್ನಿತರೆ ಬಹು ವಾರ್ಷಿಕ ಬೆಳೆಗಳ ತೋಟಗಳನ್ನು ಭೀಕರ ಬರದಿಂದ ಉಳಿಸಿಕೊಳ್ಳಲು ನೆರವಾಗಬೇಕಾಗಿದ್ದ ತೋಟಗಾರಿಕೆ ಖಾತೆಯನ್ನು ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಐಸಿಸಿ ಸಭೆಗೆ ಗೈರು ಹಾಜರಾಗಿದ್ದಾರೆ.