ಭದ್ರಾ ನಾಲೆಯಲ್ಲಿ ನೀರು ಹರಿಸಲು ಒತ್ತಾಯಿಸಿ ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೯: ಭದ್ರಾ ಜಲಾಶಯದಿಂದ ಎಡನಾಲೆ ಹಾಗೂ ಬಲನಾಲೆಯಲ್ಲಿ 100 ದಿನಗಳ ಕಾಲ ನೀರು ಹರಿಸುವಿಕೆ ನಿಲುಗಡೆ ವಿರೋಧಿಸಿ ಭಾರತ ರೈತ ಒಕ್ಕೂಟವು ಭಾನುವಾರ ಜಿಲ್ಲಾ ಪಂಚಾಯತಿ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿತು.ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದ ರೈತರು, ಯಾವುದೇ ಕಾರಣಕ್ಕೂ ಭದ್ರಾ ಜಲಾಶಯದ ನೀರು ಹೊರ ಹರಿಸುವಿಕೆ ನಿಲ್ಲಿಸಬಾರದು. ಸರ್ಕಾರ ಘೋಷಿಸಿದಂತೆ 100 ದಿನಗಳ ಕಾಲ ನೀರು ಹರಿಸಬೇಕು. ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು, ನೀರು ನಿಲುಗಡೆ ಮಾಡಿದರೆ ತೊಂದರೆ ಆಗುತ್ತದೆ. ಪುನರ್ ಪರಿಶೀಲಿಸಿ ನೀರು ನಿಲ್ಲಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಭದ್ರಾ ನಾಲೆಯಿಂದ ದಾವಣಗೆರೆ ಭಾಗಕ್ಕೆ 100 ದಿನಗಳ ಕಾಲ ನೀರು ಹರಿಸುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು. ಆದರೆ, ಇದೀಗ ನೀರು ನಿಲುಗಡೆ ಮಾಡುವ ಮೂಲಕ ಸರ್ಕಾರ ತನ್ನ ಮಾತನ್ನು ಬದಲಾಯಿಸಿದೆ. ಇದರಿಂದಾಗಿ ರೈತರು ಅತಂತ್ರ ಸ್ಥಿತಿಗೆ ಸಿಲುಕಿದ್ದು, ರಾಜ್ಯ ಸರ್ಕಾರ ರೈತರನ್ನು ಮತ್ತಷ್ಟು ಸಂಕಷ್ಠಕ್ಕೆ ದೂಡಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.ಭದ್ರಾ ನಾಲೆಯಲ್ಲಿ 100 ದಿನಗಳ ಕಾಲ ನೀರು ಹರಿಸುವವರೆಗೂ ನಮ್ಮಗಳ ಹೋರಾಟ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಹಿಂದಕ್ಕೆ ಪಡೆಯುವುದಿಲ್ಲ. ರಾಜ್ಯ ಸರ್ಕಾರ ಇದೇ ರೀತಿ ಮೊಂಡುತನ ಮಾಡಿದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಭಾರತೀಯ ರೈತ ಒಕ್ಕೂಟದ ಮುಖಂಡರಾದ ಶಾಮನೂರು ಲಿಂಗರಾಜು, ಕೊಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್, ಹೆಚ್.ಎನ್.ಗುರುನಾಥ್, ಕುಂದುವಾಡದ ಗಣೇಶಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ ಇತರರು ಇದ್ದರು.