ಭದ್ರಾ ಡ್ಯಾಂ ಬಳಿ ತಡೆಗೋಡೆ ಕುಸಿತ : ಅಪಾಯದ ಭೀತಿ – ಕಣ್ಮುಚ್ಚಿ ಕುಳಿತ ಆಡಳಿತ!

ಶಿವಮೊಗ್ಗ, ಜು. 18: ಶಿವಮೊಗ್ಗ ಜಿಲ್ಲೆಯ ಭದ್ರಾ ಡ್ಯಾಂ ಗರಿಷ್ಠ ಮಟ್ಟ ತಲುಪಿದ್ದು, ಕಳೆದ ಹಲವು ದಿನಗಳಿಂದ ನೀರು ಹೊರ ಬಿಡಲಾಗುತ್ತಿದೆ. ಜಲರಾಶಿ ಸೊಬಗು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಸಿತ್ತಿದ್ದಾರೆ. ಆದರೆ ಡ್ಯಾಂ ನೀರಿನ ರಭಸಕ್ಕೆ ಸಮೀಪದಲ್ಲಿ ಭೂ ಕುಸಿತ ಉಂಟಾಗಿದೆ. ತಡೆಗೋಡೆ ಕುಸಿದು ಬಿದ್ದಿದೆ!
ದಿನದಿಂದ ದಿನಕ್ಕೆ ಭೂ ಕುಸಿತ ಹೆಚ್ಚಾಗುತ್ತಿದೆ. ಅಪಾಯಕಾರಿ ಸ್ಥಿತಿಯಲ್ಲಿದೆ. ಆದರೆ ಇಲ್ಲಿಯವರೆಗೂ ಸೂಕ್ತ ದುರಸ್ತಿ ಕಾಮಗಾರಿಯಾಗಲಿ, ಮುನ್ನೆಚ್ಚರಿಕೆ ಕ್ರಮವಾಗಲಿ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯ ಬ್ಯಾರಿಕೇಡ್ ಕೂಡ ಕುಸಿದು ನದಿಗೆ ಬಿದ್ದಿದೆ ಎಂದು ಪ್ರವಾಸಿಗರು ದೂರಿದ್ದಾರೆ.
ಡ್ಯಾಂನಿಂದ ನೀರು ಹೊರಬಿಟ್ಟಿರುವ ಕಾರಣದಿಂದ ಭಾರೀ ಸಂಖ್ಯೆಯ ಪ್ರವಾಸಿಗರು ಡ್ಯಾಂ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ತಡೆಗೋಡೆ ಕುಸಿತವಾಗಿರುವ ಸ್ಥಳದ ಬಳಿಯೇ ಓಡಾಡುತ್ತಿದ್ದಾರೆ. ಕೊಂಚ ಹೆಚ್ಚಾ ಕಮ್ಮಿಯಾದರೂ ನದಿಗೆ ನಾಗರೀಕರು ನದಿಗೆ ಬೀಳುವ ಸಾಧ್ಯತೆಯಿದೆ.
ತಕ್ಷಣವೇ ಭದ್ರಾ ಜಲಾಶಯ ಆಡಳಿತ ದುರಸ್ತಿ ಕಾರ್ಯ ನಡೆಸಬೇಕು. ಜೊತೆಗೆ ಸ್ಥಳದಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಿ, ಸೂಕ್ತ ಬ್ಯಾರಿಕೇಡ್ – ಮುನ್ನೆಚ್ಚರಿಕೆ ಫಲಕ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.