ಭದ್ರಾ ಡ್ಯಾಂ ನೀರು ಹರಿಸುವಿಕೆ ಆನ್ ಅಂಡ್ ಆಫ್ ಇಲ್ಲ: 500 ಕ್ಯೂಸೆಕ್ ಕಡಿಮೆ ಮಾತ್ರ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೯:ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ಬಂದ್ ಮಾಡಿರುವುದರ ವಿರುದ್ಧ ದಾವಣಗೆರೆಯಲ್ಲಿ ರೈತರು ಹೋರಾಟದ ರಣಕಹಳೆ ಮೊಳಗಿಸಿದ ಕಾರಣ ಎಚ್ಚೆತ್ತುಕೊಳ್ಳಲಾಗಿದೆ. ಡ್ಯಾಂನಿಂದ ನೀರು ಹೊರ ಬಿಡುವುದನ್ನು ನಿಲ್ಲಿಸಲಾಗಿಲ್ಲ. ನೀರು ಹರಿಸಲಾಗುತ್ತಿದೆ.ಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವ ಕಾರಣ ಸರ್ಕಾರದ ಮುಂದೆ ಎರಡು ವಿಚಾರಗಳು ಪ್ರಸ್ತಾಪ ಆಗಿದ್ದವು. ಒಂದು ಆನ್ ಅಂಡ್ ಆಫ್. ಮತ್ತೊಂದು ನಾಲೆಯಲ್ಲಿ ನೀರು ಹರಿಸುವಿಕೆಯ ಕ್ಯೂಸೆಕ್ ಕಡಿಮೆಗೊಳಿಸುವುದು. ಈಗ ಭದ್ರಾ ಬಲದಂಡೆ ನಾಲೆಯಲ್ಲಿ 2500 ಕ್ಯೂಸೆಕ್ ಗೂ ಹೆಚ್ಚು ನೀರು ಹರಿಸಲಾಗುತ್ತಿದೆ. ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಯಾಗಿಲ್ಲ. ಹತ್ತು ದಿನಗಳ ಕಾಲ ನೀರು ಹರಿಸಿದರೆ ತೊಂದರೆಯಾಗುತ್ತದೆ. ಹಾಗಾಗಿ ಯಥಾಸ್ಥಿತಿ ನೀರು ಹರಿಸುವಿಕೆ ಮುಂದುವರಿದಿದ್ದರೂ, 500 ರಿಂದ 1000 ಕ್ಯೂಸೆಕ್ ನೀರು ಕಡಿಮೆ ಹರಿಸುವಂತೆ ಸೂಚಿಸಲಾಗಿದೆ.ಹರಿಹರ, ಮಲೇಬೆನ್ನೂರು, ಹೊನ್ನಾಳಿ ಸೇರಿದಂತೆ ಜಿಲ್ಲೆಯ ರೈತರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನೀರು ಹರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಜೊತೆ ನಾನು ಮಾತನಾಡಿದ್ದೇನೆ. ನೀರಾವರಿ ಇಲಾಖೆಯ ಎಂಡಿ ಅವರ ಜೊತೆಗೂ ಪರಿಸ್ಥಿತಿ ವಿವರಿಸಿದ್ದೇನೆ. ಆನ್ ಅಂಡ್ ಆಫ್ ಬೇಡ.ಮಲೇಬೆನ್ನೂರಿನಲ್ಲಿ ಮಳೆಯಾಗಿಲ್ಲ. 500 ಕ್ಯೂಸೆಕ್ ನೀರು ಕಡಿಮೆ ಮಾಡಿ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀರು ಕಡಿಮೆಯಾಗುತ್ತದೆ. 0.6 ಟಿಎಂಸಿ ಅಷ್ಟೇ ಇಳಿಕೆಯಾಗುತ್ತದೆ. ಹಾಗಾಗಿ, ತೊಂದರೆ ಆಗದು. ಹತ್ತು ದಿನಗಳ ಕಾಲ ನೀರು ಬಂದ್ಮಾಡುವುದು ಬೇಡ ಎಂದು ಹೇಳಿದ್ದೇನೆ. ಆನ್ ಅಂಡ್ ಆಫ್ ಮಾಡಿಲ್ಲ. ನೀರು ಹರಿಸಲಾಗುತ್ತಿದೆ. ಎಲ್ಲಾ ಕಡೆ ರೈತರು ನಾಟಿ ಮಾಡಿದ್ದಾರೆ. ಯಾವ ರೈತರಿಗೂ ಅನ್ಯಾಯ ಆಗಬಾರದು ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.