ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಿಂದ ಕೆರೆ ಪರಿಶೀಲನೆ

ಶಿವಮೊಗ್ಗ, ಜ. 4: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಭದ್ರಾ ಎಡದಂಡೆ ನಾಲೆಯ ಶಿವಮೊಗ್ಗ ತಾಲ್ಲೂಕು ಸೋಗಾನೆ ಬಳಿ ಇರುವ ಕೆರೆಯನ್ನು ವೀಕ್ಷಿಸಿದರು.ಸುದೀರ್ಘ ರೈತ ಹೋರಾಟದಲ್ಲಿದ್ದ ಸಂದರ್ಭದಲ್ಲಿ ಕೂಡ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಜಲಾಶಯದಿಂದ ನೀರು ಬಿಟ್ಟಾಗ ಅದು ಕೊನೆಯ ಭಾಗಕ್ಕೆ ತಲುಪದೆ ಇರುವುದು ನನ್ನ ಗಮನಕ್ಕೆ ಬಂದಿದ್ದು ಸಾಕಷ್ಟು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದೆ ಎಂದರು.
ಭದ್ರಾ ಕಾಡ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದ ಅಚ್ಚುಕಟ್ಟು ಭಾಗದಲ್ಲಿ ಪ್ರವಾಸ ಕೈಗೊಂಡಾಗ ಹಾಗೂ ಕಚೇರಿಯ ಅವಧಿಯಲ್ಲಿ ರೈತರಿಂದ ಈ ಸಂಬಂಧ ನೂರಾರು ಅರ್ಜಿಗಳು ಬಂದಿರುತ್ತದೆ ಎಂದು ಹೇಳಿದ್ದಾರೆ.ಈ ಸಮಸ್ಯೆಗಳಿಗೆ ಪೂರ್ಣ ವಿರಾಮ ನೀಡಲು ಕಾರ್ಯ ಪ್ರವೃತ್ತರಾಗಿದ್ದು, ಕೊನೆಯ ಭಾಗದ ರೈತರಿಗೆ ನೀರು ತಲುಪಿಸಿ ಅನ್ನದಾತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ  ಕಾಲುವೆಗಳ ಮಧ್ಯೆ ಕೆರೆ ಬಂದಿರುವ ಕಾರಣ ಜಲಾಶಯದಿಂದ ನೀರು ಬಿಟ್ಟಾಗ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ತಲುಪದೇ ತೊಂದರೆಯಾಗುತ್ತಿರುವುದು ಕಂಡುಬಂದಿದೆ.ಕೆರೆಯೊಳಗೆ ಕಾಲುವೆ ವಿಭಜಿಸುವ ಕಾಮಗಾರಿಯಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿದ್ದು ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆರೆಯ ಸ್ಥಳ ವೀಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಗ್ರಾಮದ ರೈತರು ಉಪಸ್ಥಿತರಿದ್ದರು.