ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರ ನೀರು ಹರಿಸುವ ಬಗ್ಗೆ ಶೀಘ್ರ ಕ್ರಮ

ಸಂಜೆವಾಣಿ ವಾರ್ತೆ

ಶಿವಮೊಗ್ಗ : ಸೆ. ೭ : ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ಗಣನೀಯ ಪ್ರಮಾಣದ ನೀರಿನ ಕೊರತೆ ಇರುವುದರಿಂದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆದಿರುವ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನಿರಂತರ ನೀರು ಹರಿಸಲು ಅನುಕೂಲವಾಗುವಂತೆ ಸೆಪ್ಟಂಬರ್ 11ರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಕಾಡಾ ಅಧ್ಯಕ್ಷ ಮಧು ಎಸ್.ಬಂಗಾರಪ್ಪ ಅವರು ಹೇಳಿದರು. ಶಿವಮೊಗ್ಗ ಸಮೀಪದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಭದ್ರಾ ಜಲಾಶಯದ 83ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿಗಳು ಈ ಸಂಬಂಧ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದ್ದರ ಮೇರೆಗೆ ದಿನಾಂಕ ನಿಗಧಿಪಡಿಸಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ, ಅದರ ಸದ್ಭಳಕೆ ಹಾಗೂ ರೈತರ ಹಿತ ಕಾಯುವಲ್ಲಿ ಇರಬಹುದಾದ ಸಾಧಕ-ಬಾದಕಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಚರ್ಚಿಸಿ, ರೈತ ಮುಖಂಡರ, ಅಧಿಕಾರಿಗಳ ಹಾಗೂ ತಜ್ಞರ ಅಭಿಪ್ರಾಯ ಪಡೆದು, ಈಗಾಗಲೇ ಬೆಳೆಯಲಾಗಿರುವ ಭತ್ತ, ಬೇಸಿಗೆ ಹಂಗಾಮಿನಲ್ಲಿ ಅಡಿಕೆ, ತೆಂಗು ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಹಾಗೂ ಈ ಭಾಗದ ಜನರ ಕುಡಿಯುವ ನೀರಿನ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಅನುಕೂಲವಾಗುವಂತೆ ಮತ್ತೊಮ್ಮೆ ಶೀಘ್ರದಲ್ಲಿ ಸಭೆ ನೀರಾವರಿ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು. ಕೃಷಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ರೈತರ ಹಿತ ಕಾಯುವಲ್ಲಿ ಸರ್ಕಾರ ಬದ್ಧವಾಗಿದೆ ಎಂದವರು ನುಡಿದರು.ಆದಾಗ್ಯೂ ವಿಳಂಬವಾದರೂ ಮುಂದಿನ ಕೆಲವೇ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಲಾಗಿದೆ. ನಿರೀಕ್ಷೆಯಂತೆ ಮಳೆ ಬಂದಲ್ಲಿ ರೈತರ ಎಲ್ಲಾ ಸಮಸ್ಯೆಗಳಿಗೆ ಸಹಜವಾಗಿ ಪರಿಹಾರ ದೊರೆಯಲಿದೆ. ರೈತ ಮುಖಂಡರು ನೀಡಿದ ಸಲಹೆಯಂತೆ ಎಡದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ಇಂದಿನಿಂದಲೆ ನಿಲ್ಲಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಗಮನಹರಿಸಲಾಗುವುದು ಎಂದವರು ನುಡಿದರು.ಸಭೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡ ಕೆ.ಟಿ.ಗಂಗಾಧರ್ ಅವರು ಮಾತನಾಡಿ, ಜಲಾಶಯದಿಂದ ಈಗಾಗಲೇ ಹರಿಸಿರುವ ನೀರು ಅವೈಜ್ಞಾನಿಕವಾಗಿದೆ. ಈಗಿರುವ ನೀರಿನ ಕೊರತೆಯನ್ನು ಸರಿದೂಗಿಸುವುದು ಹೇಗೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಆದ್ದರಿಂದ ಸರ್ಕಾರದಿಂದ ಭತ್ತದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ. ತೋಟಗಾರಿಕೆ ಬೆಳೆಗಾರರಿಗೆ ಬೇಸಿಗೆಯಲ್ಲಿ ನೀರನ್ನು ಒದಗಿಸಲು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್ ಘೋಷಿಸುವಂತೆ ಅವರು ಒತ್ತಾಯಿಸಿದರು.ರೈತ ಮುಖಂಡ ಬಸವರಾಜಪ್ಪ ಅವರು ಮಾತನಾಡಿ, ಜಲಾಶಯದಿಂದ ಬಿಡುಗಡೆಯಾಗುವ ಶೇ.30ರಷ್ಟು ನೀರು ಸದ್ಬಳಕೆಯಾಗುತ್ತಿಲ್ಲ. ಅದರ ವ್ಯವಸ್ಥಿತ ನಿರ್ವಹಣೆಗಾಗಿ ಸಿಬ್ಬಂಧಿಗಳನ್ನು ನಿಯೋಜಿಸಿ ಹಾಗೂ ಚಾನಲ್‍ಗಳ ದುರಸ್ತಿಗೆ ಅನುದಾನ ನೀಡುವಂತೆ ಒತ್ತಾಯಿಸಿದ ಅವರು, ನೀರನ್ನು ಬೆಳೆಗೆ ಅಗತ್ಯವಿರುವಂತೆ ತಡೆಹಿಡಿಯುವ ಹಾಗೂ ಹರಿಸುವ ಬಗ್ಗೆ ನಿರ್ಣಯ ಕೈಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ದಾವಣಗೆರೆ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಮೀನಾ ನಾಗರಾಜ್, ರೈತ ಮುಖಂಡರಾದ ಕೆ.ಟಿ.ಗಂಗಾಧರ್, ಬಸವರಾಜಪ್ಪ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನೀರಾವರಿ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.