ಭದ್ರಾವತಿ, ಶಿವಮೊಗ್ಗ ಹೆದ್ದಾರಿ ಗುಂಡಿಗಳ ಕಾರುಬಾರು

ಶಿವಮೊಗ್ಗ, ಸೆ. ೧೨: ಶಿವಮೊಗ್ಗ – ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿ ಅಕ್ಷರಶಃ ಯಮಸ್ವರೂಪಿಯಾಗಿ ಪರಿವರ್ತಿತವಾಗಿದೆ. ಹಲವೆಡೆ ಹೆದ್ದಾರಿಯಲ್ಲಿ ಗುಂಡಿ-ಗೊಟರು ಬಿದ್ದು ಜನ-ವಾಹನ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಜೀವ ಕೈಯಲ್ಲಿಡಿದು ವಾಹನ ಚಲಾಯಿಸುವಂತಹ ದುಃಸ್ಥಿತಿಯಿದೆ.
ಪ್ರಸ್ತುತ ಬೀಳುತ್ತಿರುವ ಮಳೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತಷ್ಟು ದುಸ್ತರವಾಗಿದೆ. ಗುಂಡಿ-ಗೊಟರುಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸವಾರರು ಮತ್ತಷ್ಟು ಸಂಕಷ್ಟಪಡುವಂತಾಗಿದೆ. ಹೆದ್ದಾರಿ ಅವ್ಯವಸ್ಥೆಯಿಂದ ಅಪಘಾತಗಳು ಸರ್ವೇಸಾಮಾನ್ಯ ಎಂಬಂತಾಗಿದೆ.
ಈ ನಡುವೆ ನಿನ್ನೆ ಬೆಳಿಗ್ಗೆ ಗುಂಡಿ-ಗೊಟರಿನ ಕಾರಣದಿಂದಲೇ, ಹರಿಗೆ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್ ಅಪಘಾತಕ್ಕೀಡಾಗಿದೆ. ಅದೃಷ್ಟಾವಶಾತ್ ಕೂದಲೆಳೆ ಅಂತರದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಗಮನಹರಿಸಿ:
ಆದರೆ ಇಷ್ಟೆಲ್ಲ ದುರಾವಸ್ಥೆಯಿದ್ದರೂ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಹೆದ್ದಾರಿ ಇಲಾಖೆ ಕ್ರಮಕೈಗೊಂಡಿಲ್ಲ. ಇದು ಸ್ಥಳೀಯ ನಾಗರೀಕರು ಹಾಗೂ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹೆದ್ದಾರಿಯನ್ನು ದುರಸ್ತಿಪಡಿಸಲು ಮುಂದಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ನಾಗರೀಕರು ಸಾವು-ನೋವಿಗೆ ತುತ್ತಾಗುವುದನ್ನು ತಪ್ಪಿಸಬೇಕಾಗಿದೆ.