ಭದ್ರಮ್ಮ ವೃತ್ತಕ್ಕೆ ಬಾಬು ಜಗಜೀವನರಾಂ ಹೆಸರಿಡಲು ಒತ್ತಾಯ

ತುಮಕೂರು, ಏ. ೩- ನಗರದ ಗುಬ್ಬಿಗೇಟ್ ವೃತ್ತಕ್ಕೆ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಹಾಗೂ ಭದ್ರಮ್ಮ ವೃತ್ತಕ್ಕೆ ಡಾ. ಬಾಬು ಜಗಜೀವನರಾಂ ಹೆಸರಿಡುವಂತೆ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಅವರು ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ದೇಶದಲ್ಲಿಯೇ ಮೊದಲ ದಲಿತ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಲು ಕಾರಣರಾಗಿದ್ದಾರೆ. ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ. ಇವರ ಹೆಸರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಗುಬ್ಬಿಗೇಟ್ ವೃತ್ತಕ್ಕೆ ಡಾ. ಹೆಚ್.ಎಂ. ಗಂಗಾಧರಯ್ಯನವರ ಹೆಸರಿಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಹಾಗೆಯೇ ಹಸಿರು ಕ್ರಾಂತಿಯ ಮೂಲಕ ತುತ್ತು ಅನ್ನಕ್ಕಾಗಿ ವಿದೇಶಗಳು ನೀಡುವ ಅಳಿದುಳಿದ ಅಕ್ಕಿ, ಗೋಧಿಯ ಮೇಲೆ ಅವಲಂಬಿತವಾಗಿದ್ದ ಭಾರತ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರಾದ ಉಪಪ್ರಧಾನಿ, ಭಾರತ ರತ್ನ ಡಾ. ಬಾಬು ಜಗಜೀವನರಾಂ ಅವರು ಕಾರ್ಮಿಕ ಸಚಿವರಾಗಿ ತಂದಂತಹ ಹಲವಾರು ಸುಧಾರಣೆಗಳು, ಭಾರತದ ಕಾರ್ಮಿಕ ವರ್ಗ ಭದ್ರತೆಯಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಇಂತಹ ಮಹಾನುಭಾವರ ಹೆಸರನ್ನು ನಗರದ ಭದ್ರಮ್ಮ ವೃತ್ತಕ್ಕೆ ಇಡುವ ಮೂಲಕ ಅವರ ಹೆಸರು ಜನಮಾನಸದಲ್ಲಿ ಹಚ್ಚಳಿಯದೆ ಉಳಿಯುವಂತೆ ಮಾಡಬೇಕು ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ನಾಗರಾಜು ಗೂಳಹರಿವೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ನಾಗರಾಜು ಗೂಳಹರಿವೆ, ಎ.ಎಸ್. ರಾಜು, ಗೋಪಾಲ್, ಶಿವಕುಮಾರ್ ಛಲವಾದಿ, ಬೆಟ್ಟಸ್ವಾಮಿ, ಲಕ್ಷ್ಮಯ್ಯ, ನಾಗರಾಜು, ಬೆಟ್ಟಸ್ವಾಮಿ, ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.