ಭದ್ರತಾ ಸಿಬ್ಬಂದಿಗೆ ಗುಲಾಬಿ ನೀಡಿ ಸ್ವಾಗತ

ಮುದ್ದೇಬಿಹಾಳ :ಎ.9: ತಮ್ಮ ಆಗಮನದಿಂದ ನಮ್ಮ ಬಲ ಹೆಚ್ಚಿದಂತಾಗಿದೆ. ನಾವು ನೀವು ಸೇರಿ ಬರುವ ಚುನಾವಣೆಯನ್ನು ಶಾಂತವಾಗಿ ಯಶಸ್ವಿಗೊಳಿಸೋಣ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಭದ್ರತೆಗಾಗಿ ಆಗಮಿಸಿದ್ದ ಯೋಧರನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿ ಅವರು ಮಾತನಾಡಿದರು.

ಮತಕ್ಷೇತ್ರದಲ್ಲಿ ಮುದ್ದೇಬಿಹಾಳ ಸೇರಿದಂತೆ ನಾಲತವಾಡ ಹಾಗೂ ತಾಳಿಕೋಟೆ ಹೀಗೆ ಮೂರು ದೊಟ್ಟ ಪಟ್ಟಣಗಳು ಇವೆ. ಸಧ್ಯದ ಪರೀಸ್ಥಿಯಲ್ಲಿ ಚುನಾವಣಾ ಸ್ಪರ್ದೆ ಹೆಚ್ಚಿದ್ದು ಈಗಾಗಲೇ 7 ಪ್ರಕರಣಗಳು ದಾಖಲಾಗಿ 3.50 ಕೋಟಿ ವೆಚ್ಚದ ಸರಕುಗಳು ಸೇರಿದಂತೆ 12ಸಾವಿರ ರೂಪಾಯಿಗಳನ್ನು ಜಪ್ತು ಪಡಿಸಿಕೊಂಡಿದ್ದೇವೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಹೋಗಲಾಡಿಸಿ ಮುಕ್ತವಾಗಿ ಮತ ಚಲಾಯಿಸುವಂತೆ ನೋಡಿಕೊಳ್ಳುವದು ನಮ್ಮ ಕರ್ತವ್ಯ ಎಂದರು.

69 ರೆಜಿಮೆಂಟ್ ಸಶಸ್ತ್ರ ಸೀಮಾ ಬಲದ ಅಸಿಸ್ಟಂಟ್ ಕಮಾಂಡೆಂಟ್ ಸಿಕ್ಕೀಂ ರಾಜವೀರ ಮೀನಾ ಮಾತನಾಡಿ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನಾವು ಸೇವೆ ಸಲ್ಲಿಸಿದ್ದೇವೆ. ಎಲ್ಲ ಕಡೆಗಳಲ್ಲಿಯೂ ನಮ್ಮನ್ನು ಅತ್ಯಂತ ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ಎಲ್ಲದಕ್ಕಿಂತ ಇಲ್ಲಿ ಸ್ವಾಗತಿಸಿದ ರೀತಿ ಖುಷಿ ತಂದಿದೆ ಎಂದರು.

ಪಿಎಸ್‍ಐ ಆರೀಫ್ ಮುಶಾಪುರಿ ಮಾತನಾಡಿ ತಮಗೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನಮ್ಮನ್ನು ಸಂಪರ್ಕಿಸಿದಲ್ಲಿ ಕೂಡಲೇ ಸ್ಪಂದಿಸುತ್ತೇವೆ ಎಂದರು. ಎಲ್ಲ ಯೋಧರಿಗೆ ಗುಲಾಬಿ ಹೂ ನೀಡಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಎಎಸೈ ಕೆ.ಎಸ್.ಅಸ್ಕಿ, ಪೇದೆಗಳಾದ ಸಂಗನಗೌಡ ಬಿರಾದಾರ, ಸಂಜು ಜಾದವ, ಶ್ರೀಕಾಂತ ಬಿರಾದಾರ ಸೇರಿದಂತೆ ಇತರರು ಇದ್ದರು.