ಭದ್ರತಾ ಪಡೆ ನಾಪತ್ತೆ ನಕ್ಸಲರು ಅಪಹರಿಸಿರುವ ಶಂಕೆ

ನವದೆಹಲಿ, ಏ.೬- ಛತ್ತೀಸ್‌ಗಢ ಬಿಜಾಪುರದಲ್ಲಿ ನಾಪತ್ತೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿರಬಹುದು ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.
ಛತ್ತೀಸ್‌ಗಢನಲ್ಲಿ ದಾಳಿ ನಡೆಸಿದ ಯೋಧ ಕಾಣೆಯಾದ ಕಾರಣ, ನಕ್ಸಲರಿಂದ ಆತನನ್ನು ಅಪಹರಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.
ಸುಕ್ಮಾ-ಬಿಜಾಪುರ ಗಡಿಯಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಏ.೩ರ ಮಧ್ಯಾಹ್ನ ನಡೆದ ದಾಳಿಯಲ್ಲಿ ಕನಿಷ್ಠ ೨೨ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಸುಮಾರು ೩೧ ಮಂದಿ ಗಾಯಗೊಂಡಿದ್ದಾರೆ ಎಂದು ಛತ್ತೀಸ್‌ಗಢ್ ಪೋಲೀಸರು ಹೇಳಿದ್ದಾರೆ.
ಇನ್ನು, ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಪ್ರತಿಕ್ರಿಯಿಸಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಪುನರುಚ್ಚರಿಸಿದರು.
ಕಾರ್ಯಾಚರಣೆ ನಾಲ್ಕು ಗಂಟೆಗಳ ಕಾಲ ನಡೆಯಿತು ಮತ್ತು ಭದ್ರತಾ ಪಡೆಗಳು ನಕ್ಸಲ್ ಪೀಡಿತ ಪ್ರದೇಶಗಳನ್ನು ಪ್ರವೇಶಿಸಿ ಶೌರ್ಯದಿಂದ ಹೋರಾಡಿದವು. ರಾಜ್ಯದಲ್ಲಿ ನಕ್ಸಲರ ಪ್ರಭಾವ ವೇಗವಾಗಿ ಕುಗ್ಗುತ್ತಿದೆ, ಮತ್ತು ಈಗ ರಾಜ್ಯದ ಅತ್ಯಂತ ಸೀಮಿತ ಪ್ರದೇಶಕ್ಕೆ ನಕ್ಸಲರ ಚಳುವಳಿ ಸೀಮಿತವಾಗಿದೆ ಎಂದು ತಿಳಿಸಿದರು.
ದಾಳಿಯ ನಂತರದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಛತ್ತೀಸ್‌ಗಢ್‌ನಲ್ಲಿರುವ ಸಿಆರ್‌ಪಿಎಫ್ ಡಿಜಿ ಕುಲದೀಪ್ ಸಿಂಗ್, ಕಾರ್ಯಾಚರಣೆಯಲ್ಲಿ ಯಾವುದೇ ಗುಪ್ತಚರ ಅಥವಾ ಕಾರ್ಯಾಚರಣೆಯ ವೈಫಲ್ಯ ಇಲ್ಲ ಎಂದು ನುಡಿದಿದ್ದಾರೆ.

ನನ್ನ ಅಪ್ಪನನ್ನು ಬಿಟ್ಟುಬಿಡಿ..!
ನಕ್ಸಲ್ ಅಂಕಲ್, ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟುಬಿಡಿ. ಇದು ಶನಿವಾರ ಛತ್ತೀಸ್‌ಗಢ್‌ದಲ್ಲಿ ಮಾವೋವಾದಿಗಳೊಂದಿಗೆ ಗುಂಡಿನ ಕಾಳಗದ ಬಳಿಕ ನಾಪತ್ತೆಯಾಗಿರುವ ಸಿಆರ್‌ಪಿಎಫ್ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಐದರ ಹರೆಯದ ಪುತ್ರಿ ರಾಘ್ವಿ ಮಾಡಿಕೊಂಡಿರುವ ಮನವಿ.
ಜಮ್ಮುವಿನಲ್ಲಿರುವ ಮನ್ಹಾಸ್ ನಿವಾಸದಲ್ಲಿ ರಾಘ್ವಿ ಮಾವೋವಾದಿಗಳ ಒತ್ತೆ ಸೆರೆಯಿಂದ ತನ್ನ ತಂದೆಯ ಬಿಡುಗಡೆಗಾಗಿ ಈ ಮನವಿಯನ್ನು ಮಾಡಿಕೊಂಡಾಗ ಅಲ್ಲಿದ್ದವರ ಕಣ್ಣುಗಳು ಹನಿಗೂಡಿದ್ದವು.
‘ಪಾಪಾ ಕಿ ಪರಿ ಪಾಪಾ ಕೋ ಬಹುತ್ ಮಿಸ್ ಕರ್ ರಹೀ ಹೈ. ಮೈ ಅಪ್ನೆ ಪಾಪಾ ಸೆ ಬಹುತ್ ಪ್ಯಾರ್ ಕರ್ತೀ ಹೂಂ. ಪ್ಲೀಸ್ ನಕ್ಸಲ್ ಅಂಕಲ್, ಮೇರೆ ಪಾಪಾ ಕೋ ಘರ್ ಭೇಜ್ ದೋ’ ಎಂದು ರಾಘ್ವಿ ನಕ್ಸಲರಿಗೆ ತನ್ನ ಮನವಿಯಲ್ಲಿ ಹೇಳಿದ್ದಾಳೆ.