ಭದ್ರತಾಪಡೆ ಗುಂಡೇಟಿಗೆ 4 ಉಗ್ರರರು ಬಲಿ

ಜಮ್ಮು, ನ. ೧೯- ಜಮ್ಮು-ಕಾಶ್ಮೀರದ ನಾಗ್ರೋಟ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ೪ ಮಂದಿ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ಭದ್ರತಾಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ.
ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ನಾಗ್ರೋಟದ ನಿಷೇಧಿತ ಪ್ರದೇಶದಲ್ಲಿ ಇಂದು ಮುಂಜಾನೆ ೪.೫೦ರ ಸಮಯದಲ್ಲಿ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ವಿಶೇಷ ಕಾರ್ಯಾಚರಣೆ ಪಡೆಯ ಅಧಿಕಾರಿ ಕುಲಿದೀಪ್ ರಾಜ್ ಗಾಯಗೊಂಡಿದ್ದು, ಅವರನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುವಿನ ನಾಗ್ರೋಟದ ಟೋಲ್‌ಪ್ಲಾಜಾ ಬಳಿ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ವಲಯದ ಐಜಿಪಿ ಮುಖೇಶ್‌ಸಿಂಗ್ ತಿಳಿಸಿದ್ದಾರೆ.
ಪೊಲೀಸರ ಮೇಲೆ ಭಯೋತ್ಪಾದಕರು ಗ್ರನೇಡ್ ಮತ್ತು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಮತ್ತು ಭದ್ರತಾಪಡೆ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ಟೋಲ್ ಬಳಿ ಉಗ್ರರ ಗುಂಪು ಸಿಆರ್‌ಪಿಎಫ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಸಿಆರ್‌ಪಿಎಫ್ ವಕ್ತಾರ ಶಿವಾನಂದನ್ ಸಿಂಗ್ ತಳಿಸಿದ್ದಾರೆ.
ಈ ದಾಳಿಯಲ್ಲಿ ಭದ್ರತಾ ಪಡೆಗಳು ೩ ಮಂದಿ ಉಗ್ರರನ್ನು ಹೊಡೆದುರುಳಿಸಿದ್ದರು ಎಂದು ತಿಳಿಸಿದ್ದಾರೆ.
೧೨ ಮಂದಿಗೆ ಗಾಯ
ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ ಗ್ರನೇಡ್ ದಾಳಿಯಲ್ಲಿ ೧೨ ಮಂದಿ ನಾಗರಿಕರಿಗೆ ತೀವ್ರ ಗಾಯಗಳಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪುಲ್ವಾಮಾ ಜಿಲ್ಲೆಯ ಕಕಪೋರಾದ ಪ್ರದೇಶದಲ್ಲಿ ಕೇಂದ್ರೀಯ ಮೀಸಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಲ್ಲಿ ನಾಗರಿಕರು ಗಾಯಗೊಂಡಿದ್ದಾರೆ.

ನಗ್ರೋಟಾದಲ್ಲಿ ಗುಂಡಿನ ಚಕಮಕಿ.

ಭದ್ರತಾ ಪಡೆಗಳಿಂದ ನಾಲ್ವರು ಭಯೋತ್ಪಾದಕರ ಹತ್ಯೆ.

ಜೈಷ್-ಎ-ಮೊಹಮದ್ ಸಂಘಟನೆಗೆ ಸೇರಿದವರೆಂದು ಗುರುತು.

ಗುಂಡಿನ ಚಕಮಕಿಯಲ್ಲಿ ಪೊಲೀಸ್ ಅಧಿಕಾರಿಗೆ ಗಾಯ ಆಸ್ಪತ್ರೆಗೆ ದಾಖಲು.

ಸ್ಥಳದಲ್ಲಿ ಬಿಗುವಿನ ವಾತಾವರಣ ಕಾರ್ಯಾಚರಣೆ ಮುಂದುವರಿಕೆ.