ಭದ್ರತಾಪಡೆ ಗುಂಡಿಗೆ ಓರ್ವ ನಕ್ಸಲ್ ಬಲಿ

ಬಿಜಾಪುರ(ಛತ್ತೀಸ್‌ಘಡ),ಏ.೨೧:ನಕ್ಸಲೀಯರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ಚುರುಕುಗೊಳಿಸಿ ಓರ್ವ ನಕ್ಸಲ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿವೆ.
ಬಿಜಾಪುರ ಜಿಲ್ಲೆಯ ಬೈರಂಘಡ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶ್‌ಕುತುಲ್ ಗ್ರಾಮದ ಅರಣ್ಯದಲ್ಲಿ ಜಿಲ್ಲಾ ಮೀಸಲು ಪಡೆ ನಕ್ಮಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ನಕ್ಸಲೀಯರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ನಕ್ಸಲ್ ಹತನಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಯ್ಪುರದಿಂದ ೪೦೦ ಕಿ.ಮೀ ದೂರದಲ್ಲಿರುವ ಕೇಶ್‌ಕುತುಲ್-ಕೇಶ್‌ಮುಂಡಿ ಅರಣ್ಯ ಪ್ರದೇಶದಲ್ಲಿ ಮಾವೊವಾದಿ ಕಮಾಂಡರ್ ಹಾಗೂ ೧೫ ರಿಂದ ೨೦ ಮಂದಿ ನಕ್ಸಲೀಯರು ಇರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲೀಯ ಮೃತಪಟ್ಟಿದ್ದಾನೆ.
ಘಟನಾಸ್ಥಳದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಭದ್ರತಾ ಪಡೆಗಳು ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ.
ಛತ್ತೀಸ್‌ಘಡದಲ್ಲಿ ಈ ವರ್ಷ ೮೦ ನಕ್ಸಲೀಯರು ಹತರಾಗಿದ್ದಾರೆ. ಇತ್ತೀಚೆಗೆ ನಡೆದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ೨೯ ನಕ್ಸಲರನ್ನುಹತ್ಯೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.