ಭತ್ತ ಸೇರಿ ಕೃಷಿ ಉತ್ಪನ್ನಗಳಿಗೆ ಬೆಂಬಲಿತ ಬೆಲೆ ಖರೀದಿ

ನ.30 ನೋಂದಣಿ , ಡಿ.01 ರಿಂದ ಖರೀದಿ
ರಾಯಚೂರು.ನ.01- ಭತ್ತ ಬೆಳೆಗಾರರಿಗೆ ಬೆಲೆ ಕುಸಿತ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಬೆಂಬಲಿತ ಬೆಲೆಗೆ ಭತ್ತ ಸೇರಿದಂತೆ ಶೇಂಗಾ, ಕೊಬ್ಬರಿ, ತೊಗರಿ, ಉದ್ದು ಖರೀದಿಸಲು ಕ್ರಮ ಕೈಗೊಳ್ಳಲಾಗಿದ್ದು, ನ.30 ರವರೆಗೆ ನೋಂದಣಿ ಮತ್ತು ಡಿ.1 ರಿಂದ ಖರೀದಿ ಆರಂಭಿಸಲಾಗುತ್ತದೆಂದು ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರಿಂದು ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಖರೀದಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಬೆಂಬಲ ಬೆಲ ಯೋಜನೆಯಡಿ ಭತ್ತ, ಶೇಂಗಾ, ಕೊಬ್ಬರಿ, ತೊಗರಿ, ಉದ್ದು ಮತ್ತು ಉಂಡೆ ಕೊಬ್ಬರಿಯನ್ನು ಖರೀದಿಸಲು ಉಪ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದೇ ನ.೩೦ರ ವರೆಗೆ ನೋಂದಣಿ ಮತ್ತು ಡಿ.೧ ರಿಂದ ಖರೀದಿಸಲಾಗುವುದು. ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುಲಾಗುವುದು ಎಂದರು.
ಮಾರುಕಟ್ಟೆಯಲ್ಲಿ ಬೆಳೆಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದರೆ, ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಖರೀದಿಸುವದರಿಂದ ಮಾರುಕಟ್ಟೆಯಲ್ಲಿ ಕೊರತೆಯುಂಟಾಗಿ ಬೆಳೆಗಳ ಬೆಲೆ ಹೆಚ್ಚಾಗಲಿದೆ. ಬೆಂಬಲ ಬೆಲೆಗಿಂತ ಮಾರುಕಟ್ಟೆಯಲಿ ಖರೀದಿ ದರ ಹೆಚ್ಚಾದರೆ ರೈತರು ಮಾರುಕಟ್ಟೆಯಲ್ಲಾದರೂ ಮಾರಾಟ ಮಾಡಬಹುದು ಅಥವಾ ಸರ್ಕಾರದ ಖರೀದಿ ಕೇಂದ್ರದಲ್ಲಾದರೂ ಮಾರಾಟ ಮಾಡಬಹುದಾಗಿದೆ ಎಂದರು.
ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಕೇಂದ್ರ ಸರ್ಕಾರ ಸರ್ವೇ ಕಾರ್ಯಕ್ಕೆ ಸೂಚಿಸಿದ್ದು, ಸರ್ವೇ ಇನ್ನೂ ಪ್ರಗತಿಯಲ್ಲಿದೆ. ಸರ್ವೇ ಬಂದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲಾಗುವುದು. ಈಗಾಗಲೇ ಪ್ರವಾಹದಿಂದ ಭಾದಿತವಾದ ಕೃಷ್ಣ ನದಿ ಪಾತ್ರ ೩ ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಯಾರೇ ಆಗಲಿ ಪಕ್ಷದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಮುಖ್ಯಮಂತ್ರಿಗಳ ಕುರಿತು ಮಾತನಾಡಿದ ಯತ್ನಾಳರವರ ವಿರುದ್ದ ಯಾವ ಕ್ರಮ ಕೈಗೊಳ್ಳಬೇಕೆಂಬುದರ ಕುರಿತು ಪಕ್ಷ ನಿರ್ಧರಿಸಲಿದೆ. ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಆಲೋಚನೆ, ವಿಧಿ, ನಿಯಮ ವಿದೆ. ಪ್ರತಿಯೊಬ್ಬರು ಅದನ್ನು ಪಾಲಿಸಬೇಕು. ಎಲ್ಲವನ್ನು ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಕೃಷ್ಣದಲ್ಲಿರುವ ಕನ್ನಡ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡಲಾಗುವುದು. ಜಿಲ್ಲೆಯಲ್ಲ ಉನ್ನತಕ್ಕೆ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಬಿಜೆಪಿ ಮುಖಂಡರಾದ ಬಸನಗೌಡ ಬ್ಯಾಗವಾಟ್, ಶಂಕ್ರಪ್ಪ ವಕೀಲ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಕ್ತಿಯಾರ್, ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಅಪರ ಜಿಲ್ಲಾಧಿಕಾರಿ ದುರ್ಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.