ಭತ್ತ, ಶೇಂಗಾ, ಈರುಳ್ಳಿ, ರೇಷ್ಮೆಗೂಡಿಗೆ ಪ್ರೋತ್ಸಾಹ ಧನ ಘೋಷಣೆಗೆ ಆಗ್ರಹ

ಕಲಬುರಗಿ:ಏ.29:ಭತ್ತ, ಶೇಂಗಾ, ಈರುಳ್ಳಿ ಹಾಗೂ ರೇಷ್ಮೆ ಗೂಡಿಗೆ ಪ್ರೋತ್ಸಾಹ ಧನ ಘೋಷಿಸಿ, ಖರೀದಿ ಕೇಂದ್ರಗಳನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ರಾಜ್ಯವು ಕಳೆದೆರಡು ವರ್ಷಗಳಿಂದ ಕೋವಿಡ್-19ದಿಂದ ಬಾಧಿಸಲ್ಪಟ್ಟಿದೆ. ಈಗ ಮತ್ತೊಮ್ಮೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಮುಂಗಾರು ಬೆಳೆಗಳಿಗೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ಬೋನಸ್ ಘೋಷಿಸಲಿಲ್ಲ, ಮಾತ್ರವಲ್ಲ, ಕೇಂದ್ರ ಸರ್ಕಾರ ಘೋಷಿಸಿದ ಜೋಳ, ರಾಗಿ, ಮೆಕ್ಕೆಜೋಳ, ಈರುಳ್ಳಿ, ಹತ್ತಿ, ಒಣಮೆಣಸಿನಕಾಯಿ ಮುಂತಾದ ಬೆಳೆಗಾರರು ತಲಾ ಕ್ವಿಂಟಲ್ ಬೆಳೆಗೆ ಸರಾಸರಿ 1000ರೂ.ಗಳಿಗೂ ಅಧಿಕ ನಷ್ಟವನ್ನು ತಲಾ ಎಕರೆಗೆ ಕನಿಷ್ಠವೆಂದರೂ 15ರಿಂದ 35 ಸಾವಿರ ರೂ.ಗಳ ನಷ್ಟ ಹೊಂದಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭತ್ತಕ್ಕೆ ಕೇಂದ್ರ ಸರ್ಕಾರ 1880ರೂ.ಗಳನ್ನು ಘೋಷಿಸಿದೆ. ಕರ್ನಾಟಕ ಸರ್ಕಾರವು ಯಾವುದೇ ಬೋನಸ್ ಘೋಷಿಸಲಿಲ್ಲ. ಪಕ್ಕದ ಕೇಋಳ ರಾಜ್ಯ ಪ್ರತಿ ಕ್ವಿಂಟಲ್‍ಗೆ 900ರೂ.ಗಳ ಬೋನಸ್ ಘೋಷಿಸಿದೆ. ಕರ್ನಾಟಕದಲ್ಲಿ ಮುಂಗಾರು ಹಾಗೂ ಈಗ ಹಿಂಗಾರುಗಳಲ್ಲಿ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸಿಕ್ಕಿರುವುದು ಮತ್ತು ಸಿಗುತ್ತಿರುವುದು ತಲಾ ಕ್ವಿಂಟಲ್‍ಗೆ ಕೇವಲ 1200ರೂ.ಗಳಿಂದ 1400ರೂ.ಗಳಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಘೋಷಿಸಿದ ಬೋನಸ್ ಸೇರಿಸಿ ಲೆಕ್ಕಿಸಿದರೆ ಕರ್ನಾಟಕದ ಭತ್ತ ಬೆಳೆಗಾರರು ಪ್ರತಿ ಕ್ವಿಂಟಲ್‍ಗೆ ಕನಿಷ್ಠ 1400ರೂ.ಗಳು ಮತ್ತು ತಲಾ ಎಕರೆಗೆ 14000ರೂ.ಗಳಿಂದ 35,000ರೂ.ಗಳ ನಷ್ಟ ಹೊಂದಿದ್ದಾರೆ. ಕೇರಳ ಸರ್ಕಾರ ಅಲ್ಲಿನ ಭತ್ತ, ತೊಗರಿ ಮತ್ತಿತರ ಬೆಳೆಗಾರರಿಗೆ ಪ್ರತಿ 2.5 ಎಕರೆಗೆ 20,000ರೂ.ಗಳಿಂದ 30,000ರೂ.ಗಳ ನೆರವು ನೀಡುತ್ತಿದೆ. ಕರ್ನಾಟಕ ಸರ್ಕಾರ ಇಂತಹ ಯಾವುದೇ ನೆರವನ್ನು ನೀಡುತ್ತಿಲ್ಲ ಎಂದು ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ರಾಜ್ಯಾದ್ಯಂತ ಹಲವು ದಶ ಸಾವಿರ ಕೋಟಿ ರೂಗಳ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಈಗಲೂ ಹಿಂಗಾರು ದಿನಗಳಲ್ಲೂ ರಾಜ್ಯದ ಭತ್ತ ಬೆಳೆಗಾರರು ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ ಪ್ರತಿ ಕ್ವಿಂಟಲಿಗೆ ಸುಮಾರು 500ರೂ.ಗಳಷ್ಟು, ಶೇಂಗಾ ಬೆಳೆಗಾರರು 400ರೂ.ಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಈರುಳ್ಳಿ ಬೆಲೆಯು ತೀವ್ರವಾಗಿ ಕುಸಿದಿದೆ. ಕಳೆದ ಎರಡು ತಿಂಗಳ ಹಿಂದೆ 3000ರೂ.ಗಳಿಗೆ ಮಾರಾಟವಾದರೆ, ಇದೀಗ ಕೇವಲ 950ರೂ.ಗಳಿಗೆ ಮಾರಾಟವಾಗುತ್ತಿದೆ. ರೇಷ್ಮೆ ಗೂಡು 200ರೂ.ಗಳಿಗೆ ಕುಸಿದಿದೆ. ಆದ್ದರಿಂದ ರಾಜ್ಯ ಸರ್ಕಾರವು ಈಗಲಾದರೂ ರೈತರ ಕುರಿತು ಕಿಂಚಿತ್ತು ಕಾಳಜಿ ಇದ್ದರೆ ಕೂಡಲೇ ನಾಲ್ಕು ಬೆಳೆಗಳಿಗೆ ಪ್ರೋತ್ಸಾಹ ಧನ ಘೋಷಿಸುವಂಎ ಹಾಗೂ ತಕ್ಷಣವೇ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಅವರು ಒತ್ತಾಯಿಸಿದ್ದಾರೆ.