
ಸಂಜೆವಾಣಿ ವಾರ್ತೆ
ಕುರುಗೋಡು:ಸೆ.4: ಮಳೆ ಅಭಾವದಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವ ಕಾರಣ ರೈತರು ಭತ್ತ ಬಿತ್ತನೆಗೆ ಸೀಮಿತವಾಗದೆ ಪರ್ಯಾಯ ಬೆಳೆ ಬೆಳೆಯಬೇಕು ಎಂದು ಕೃಷಿ ಅಧಿಕಾರಿ ಎಂ.ದೇವರಾಜ್ ಸಲಹೆ ನೀಡಿದರು.
ಪಟ್ಟಣ ಸಮೀಪದ ಮುಷ್ಠಘಟ್ಟ ಗ್ರಾಮದಲ್ಲಿ ಶನಿವಾರ ರೈತರ ಜಮೀನಿನಲ್ಲಿ ಪರ್ಯಾಯ ಬೆಳೆ ಕುರಿತು ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ರಾಗಿ, ಸಜ್ಜೆ, ನವಣೆ, ಸೂರ್ಯಕಾಂತಿ, ನವಣೆ, ಜೋಳದ ಬೆಳೆಗಳನ್ನು ಬೆಳೆಯುವುದು ಕ್ಷೇಮಕರ. ಈ ಬೆಳೆಗಳ ನಡುವೆ ತೊಗರಿ, ಹುರುಳಿಯನ್ನೂ ಬೆಳೆಯಲು ರೈತರು ಚಿತ್ತ ಹರಿಸಬೇಕು ಎಂದರು.
ಈಗಿನ ಪರಿಸ್ಥಿತಿಯಲ್ಲಿ ರೈತರು ಬೇಸಾಯ ಕ್ರಮಗಳನ್ನು ಬದಲಿಸಿ ಕೊಳ್ಳಬೇಕು ಮತ್ತು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಭೂಮಿಯಲ್ಲಿ ಸಾವಯವ ಪದಾರ್ಥಗಳು ಹೆಚ್ಚಾಗುತ್ತವೆ ಮತ್ತು ಬೆಳೆಗಳ ಪರಿವರ್ತ ನೆಯಾಗಿ ಭೂಫಲವತ್ತತೆ ಹೆಚ್ಚಾಗುತ್ತದೆ. ಅಲ್ಲದೇ, ಸೂಕ್ಷ್ಮಾಣುಜೀವಿಗಳ ಚಟುವಟಿಕೆ ಜಾಸ್ತಿಯಾಗಿ ಲಘುಪೋಷಕಾಂಶಗಳು ಸುಲಭವಾಗಿ ದೊರೆಯಲಿವೆ ಎಂದರು.
ನೀರಾವರಿ ಪ್ರಾರಂಭವಾದ ಮೊದಲ ಕೆಲವು ವರ್ಷಗಳು ಮಾತ್ರ ಅರೆ ನೀರಾವರಿ ಬೆಳೆಗಳನ್ನು ಬೆಳೆದು ತದನಂತರ ಭತ್ತ ಬೆಳೆಯಲು ರೈತರು ಪ್ರಾರಂಭಿಸಿ ಇಂದಿನವರೆಗೂ ನಿರಂತರವಾಗಿ ಭತ್ತವನ್ನು ಬೆಳೆದಿರುವುದರಿಂದ ಭೂಮಿ ತನ್ನ ಸತ್ವವನ್ನೇ ಕಳೆದುಕೊಂಡಿದೆ. ನಿರಂತರ ನೀರಿನ ಹರಿಯುವಿಕೆ, ನಿರಂತರ ಒಂದೇ ಬೆಳೆ ಬೆಳೆಯುವುದರಿಂದ, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯಲ್ಲಿ ಲಘು ಪೋಷಕಾಂಶಗಳೇ ಇಲ್ಲದೇ, ಕೃತಕವಾಗಿ ಗೊಬ್ಬರ ಹಾಕದೆ, ಬೆಳೆ ಬರುವ ಸ್ಥಿತಿಯಲ್ಲಿರುವುದಿಲ್ಲ.
ಆದ್ದರಿಂದ ಈಗ ನೀರಿನ ಕೊರತೆ ಇರುವ ಸಂದರ್ಭದಲ್ಲಾದರೂ ರೈತರು ಬೆಳೆಗಳ ಪರಿವರ್ತನೆ ಮಾಡಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಿಬ್ಬಂದಿಗಳು, ಮುಷ್ಠಘಟ್ಟ ಗ್ರಾಮದ ರೈತರು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.