ಭತ್ತ ಖರೀದಿ ದಾಸ್ತಾನು ಮಾಡಿಕೊಳ್ಳಲು ಸಂಸದ ಸೂಚನೆ

ರಾಯಚೂರು, ಮೇ.೨೭- ಎಪಿಎಂಸಿ ಗೋಡಾನ್ ನಲ್ಲಿ ಹಿಂಗಾರು ಹಂಗಾಮಿನ ಭತ್ತ ದಾಸ್ತಾನು ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಿಶಿಲಿಸಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಸೂಚನೆ ನೀಡಿದರು.
ಅವರು ಇಂದು ಕೃಷಿಇಲಾಖೆ,ಆಹಾರ ಮತ್ತು ನಾಗರಿಕ ಸರಬರಾಜು, ಕೆಎಫ್ ಸಿಎಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಎಪಿಎಂಸಿ ಅಧಿಕಾರಿಗಳು ಮತ್ತು ಕೆಎಫ್ಸಿ ಎಸ್ ಜಿಲ್ಲಾ ವ್ಯವಸ್ಥಾಪಕರು ಜೋಳ ಖರೀದಿಸಿದ್ದಕ್ಕಾಗಿ ರೈತರಿಗೆ ಹಣ ಸಂದಾಯ, ಬೀಜ ರಸಗೊಬ್ಬರ ಪೂರೈಕೆ ಭತ್ತ ಖರೀದಿ ಮಾಡುವ ಬಗ್ಗೆ ಮಾತನಾಡಿದರು.
ಜಂಟಿ ನಿರ್ದೇಶಕರು ಕೃಷಿ ಇಲಾಖೆ ಇವರು ಮಾತನಾಡಿ ಜಿಲ್ಲೆಯಲ್ಲಿ ಮುಂಗಾರಿನ ರಸಗೊಬ್ಬರ ಕೊರತೆ ಇಲ್ಲ. ರಸಗೊಬ್ಬರ ಒಟ್ಟು ದಾಸ್ತಾನು ೫೧೫೦೬.೫ ಮೆಟ್ರಿಕ್ ಟನ್ ಇದ್ದು, ಪ್ರತಿ ತಿಂಗಳು ಇನ್ನು ರಸಗೊಬ್ಬರ ದಾಸ್ತಾನು ಬರುತ್ತದೆ. ಮುಂಗಾರು ಹಂಗಾಮಿಗೆ ಬೇಕಾಗುವ ೩೮೯೯ ಕ್ವಿಂಟಲ್ ಗುರಿಗೆ ಸುಮಾರು ೧೪೨೪೪ ಕ್ವಿಂಟಲ್ ವಿವಿಧ ಬೀಜಗಳ ದಾಸ್ತಾನು ಇದೆ ಎಂದು ತಿಳಿಸಿದರು.
ಕೆಎಫ್ಸಿಎಸ್ ವ್ಯವಸ್ಥಾಪಕರು ಮಾತನಾಡಿ, ಜೋಳವನ್ನು ಜಿಲ್ಲೆಯಲ್ಲಿ ೯೨೦೬ ರೈತರಿಂದ ೪,೮೬,೯೪೨ ಕ್ವಿಂಟಲ್ ಖರೀದಿಸಿದ್ದು ಈಗಾಗಲೇ ೩೦೪೦ ರೈತರಿಗೆ ರೂ.೩೨,೬೧,೧೨,೩೦೧.೦೦ ಹಣ ಸಂದಾಯವಾಗಿದೆ, ಉಳಿದ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಕಡೆ ಭತ್ತ ಖರೀದಿ ಕೇಂದ್ರಗಳು ತೆರೆಯಲಾಗಿತ್ತು ಇದುವರೆಗೂ ೩೭೫ ಕ್ವಿಂಟಲ್ ಭತ್ತ ಖರೀದಿ ಆಗಿದ್ದು, ನೊಂದಣಿಗೆ ದಿನಾಂಕ ಮುಗಿದ ಕಾರಣ ಜೂನ್ ೩೦ರವರೆಗೆ ಮುಂದುವರಿಸಲು ಸರ್ಕಾರಕ್ಕೆ ವಿನಂತಿಸಿಕೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.