ಭತ್ತ ಖರೀದಿ ಕೇಂದ್ರ ಆರಂಭಿಸಲು ಸಿದ್ದತೆ ಕೈಗೊಳ್ಳಿ: ಜಿಲ್ಲಾಧಿಕಾರಿ

ಚಾಮರಾಜನಗರ, ನ.09- ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೊಜನೆಯಡಿ ರೈತರು ಬೆಳೆಗಾರರಿಂದ ಭತ್ತ ಖರೀದಿಸುವ ಸಲುವಾಗಿ ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ತೆರೆಯಲು ಪೂರ್ವ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳ ಖರೀದಿಸುವ ಸಂಬಂಧ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2020-21ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತವನ್ನು ಪ್ರತೀ ಕ್ವಿಂಟಾಲ್ ಗೆ 1868ರೂ ಹಾಗೂ ಗ್ರೇಡ್-ಎ ಭತ್ತವನ್ನು ಪ್ರತೀ ಕ್ವಿಂಟಾಲ್ ಗೆ 1888 ರೂ ದರದಲ್ಲಿ ಖರೀದಿಸಲು ಸರ್ಕಾರ ಆದೇಶಿಸಿದೆ. ಚಾಮರಾಜನಗರ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ರೈತರ ನೊಂದಣಿಯನ್ನು ನವೆಂಬರ್ 30ರಿಂದ ಆರಂಭಿಸಿ ಡಿಸಂಬರ್ 30ರವರೆಗೂ ನಡೆಸಬೇಕಿದೆ. ನೊಂದಣಿ ವಿವರಕ್ಕೆ ಅನುಗುಣವಾಗಿ ಅಕ್ಕಿ ಗಿರಣಿಗಳಲ್ಲಿ ಸಂಗ್ರಹಣೆ ಮತ್ತು ಇತರೆ ವ್ಯವಸ್ಥೆಗಳಿಗೆ ಡಿಸಂಬರ್ 1 ರಿಂದ 10ರವರೆಗೆ ಕಾಲಾವಕಾಶ ಮಾಡಿಕೊಡಬೇಕಿದೆ. ಇದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಗುಣಮಟ್ಟ ಪರಿಶೀಲನೆಗಾಗಿ ಅಸ್ಸೇಯರ್ ನೇಮಕಾತಿ, ತರಬೇತಿ ಅಕ್ಕಿ ಗಿರಣಿಗಳ ಹಲ್ಲಿಂಗ್, ಭತ್ತ ಸಂಗ್ರಹಣೆ ಸಾಮಥ್ರ್ಯ ವಿವರಗಳನ್ನು ಪಡೆದು ನೊಂದಾಯಿಸುವ ಕಾರ್ಯ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ರೈತರಿಗೆ ಅನುಕೂಲವಾಗುವಂತೆ ಖರೀದಿ ಕೇಂದ್ರಗಳನ್ನು ಆಯಾ ತಾಲ್ಲೂಕು ವ್ಯಾಪ್ತಿಯ ಎಪಿಎಂಸಿ ಆವರಣದಲ್ಲಿ ಹಾಗೂ ಎಪಿಎಂಸಿ ಇಲ್ಲದ ಕಡೆ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ತೆರೆಯಬೇಕಿದೆ. ಜಿಲ್ಲೆಗೆ ಸಂಗ್ರಹಣಾ ಸಂಸ್ಥೆಯಾಗಿ ನಿಯೋಜಿತವಾಗಿರುವ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯ ಅಧಿಕಾರಿಗಳು ಖರೀದಿ ಕೇಂದ್ರ ಆರಂಭಿಸಲು ಬೇಕಿರುವ ಎಲ್ಲಾ ಅಗತ್ಯ ಸಿದ್ದತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯ ನಿರತರಾಗಿರುವ ಅಕ್ಕಿ ಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೊಂದಾಯಿಸಿಕೊಂಡು ಹಲ್ಲಿಂಗ್ ಮತ್ತು ಶೇಖರಣಾ ಸಾಮಥ್ರ್ಯಕ್ಕೆ ಅನುಗುಣವಾಗಿ ಸಂಗ್ರಹಣಾ ಕಾರ್ಯವನ್ನು ಮಾಡಬೇಕು. ಈ ಕಾರ್ಯಕ್ಕೆ ಅವಶ್ಯವಿರುವ ದತ್ತಾಂಶವನ್ನು ಆಹಾರ ನಾಗರಿಕ ಇಲಾಖೆ ಎನ್‍ಐಸಿ ಸಹಯೋಗದೊಂದಿಗೆ ಸಿದ್ದಪಡಿಸಿ ಕೊಳ್ಳಬೇಕು ಎಂದರು.
ಭತ್ತ ಖರೀದಿಗೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಪ್ರಕಾರ ಸಾಮಾನ್ಯ ಭತ್ತವನ್ನು ಪ್ರತೀ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಖರೀದಿಸಬೇಕಿದೆ. ಭತ್ತದ ಮಾದರಿಯ ( ಸ್ಯಾಂಪಲ್) ನ್ನು ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರ ಖರೀದಿಸಿ ಸಂಗ್ರಹಣೆ ಮಾಡಬೇಕಿದೆ. ಅಕ್ಕಿ ಗಿರಣಿ ಮಾಲೀಕರಿಂದ ಭತ್ತದ ವಿವರ ಲಭ್ಯವಾದ ತಕ್ಷಣ ಖರೀದಿ ಏಜೆನ್ಸಿಗಳು ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 3 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕನಿಷ್ಠ ಬೆಂಬಲ ಯೋಜನೆಯಡಿ ಭತ್ತ ಖರಿದಿಸುವ ಕುರಿತು ಜಿಲ್ಲೆಯ ರೈತರು ಬೆಳೆಗಾರರಿಗೆ ಮಾಹಿತಿ ಪ್ರಚುರ ಪಡಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕು. ರೈತ ಸಂಪರ್ಕ ಕೇಂದ್ರಗಳು, ಗ್ರಾಮ ಪಂಚಾಯತಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಖರೀದಿ ಸಂಬಂಧ ಮಾಹಿತಿ ತಲುಪಬೇಕು. ಕರಪತ್ರ, ಪೋಸ್ಟರ್ ಸೇರಿದಂತೆ ಇತರೆ ವಿಧಾನಗಳ ಮೂಲಕವು ಭತ್ತ ಖರೀದಿ ಕುರಿತ ವಿವರಗಳು ಸಂಪೂರ್ಣವಾಗಿ ತಿಳಿಯುವಂತೆ ಇಲಾಖಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಿ.ಎನ್. ರುದ್ರಸ್ವಾಮಿ, ಕನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಯ ಜಿಲ್ಲಾ ವ್ಯವಸ್ಥಾಪಕರಾದ ಸಿ.ಎಸ್. ಜಯಶಂಕರ್, ರಾಜ್ಯ ಉಗ್ರಾಣ ನಿಗಮದ ಸಹಾಯಕ ವ್ಯವಸ್ಥಾಪಕ ಎ.ಸಿ.ಪ್ರದೀಪ್, ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ, ತಹಶೀಲ್ದಾರ್ ಚಿದಾನಂದ, ಎಪಿಎಂಸಿಯ ಕಾರ್ಯದರ್ಶಿಗಳು, ಅಕ್ಕಿ ಗಿರಣಿ ಮಾಲೀಕರು, ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.