ಭತ್ತ ಖರೀದಿ ಕೇಂದ್ರದಲ್ಲೇ ಭತ್ತ ಖರೀದಿಸಲು ಸಚಿವರಿಗೆ ಮನವಿ

ಮೈಸೂರು:ಜ:07: ಸರ್ಕಾರ ಭತ್ತ ಖರೀದಿ ಕೇಂದ್ರದಲ್ಲಿ ಜೋತಿ ಭತ್ತವನ್ನು ಖರೀದಿಸುವಂತೆ ಆದೇಶ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದೆ.
ಇಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕೈಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದ ರೈತ ಸಂಘದ ಮುಖಂಡರು ಮೈಸೂರು ಜಿಲ್ಲೆಯಲ್ಲಿ ಕಬಿನಿ, ವರುಣ, ನುಗು, ಹುಲ್ಲಹಳ್ಳಿ, ರಾಂಪುರ ನಾಲಾ ಪ್ರದೇಶಗಳಲ್ಲಿ ಸುಮಾರು ಒಂದು ಲಕ್ಷ ಐವತ್ತು ಸಾವಿರ ಹೆಚ್ಚು ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದು ಈಗ ಕಟಾವು ಪ್ರಾರಂಭವಾಗಿರುತ್ತದೆ. ಸರ್ಕಾರ ಭತ್ತದ ಖರೀದಿ ಕೇಂದ್ರಗಳನ್ನು ತೆರೆದಿದ್ದು ಕೇಂದ್ರ ಸರ್ಕಾರ ನಿಗದಿ ಪಡಿಸಿರುವಂತೆ ಉತ್ತಮ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ 1860 ಸಾಮಾನ್ಯ ಭತ್ತಕ್ಕೆ 1800ರೂ.ಗಳನ್ನು ನಿಗದಿಪಡಿಸಿರುತ್ತಾರೆ.
ಆದರೆ ಜೋತಿ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಖರೀದಿಸುತ್ತಿಲ್ಲ. ಕೇಳಿದರೆ ಸರ್ಕಾರದ ಆದೇಶವಿರುವುದಿಲ್ಲವೆಂದು ತಿಳಿಸಿರುತ್ತಾರೆ. ಕಳೆದ ವರ್ಷ ಜೋತಿ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ 2300-2400 ಕ್ಕೆ ಮಾರಾಟವಾಗಿರುತ್ತದೆ. ಈ ವರ್ಷ 1300ರಿಂದ 1400ರೂ.ಗಳಿಗೆ ಮಾರಾಟವಾಗುತ್ತಿದೆ. ಒಂದು ಎಕರೆ ಭತ್ತ ಬೆಳೆಯಲು ಸುಮಾರು 20,000ರೂ,ಗಳಿಗೂ ಹೆಚ್ಚು ಖರ್ಚಾಗಲಿದೆ. ಈ ವರ್ಷ ಭತ್ತದ ಇಳುವರಿ ಕೂಡ ಕಡಿಮೆಯಾಗಿದೆ. ಭತ್ತದ ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1000ನಷ್ಟವುಂಟಾಗುತ್ತಿದೆ ಎಂದರು.
ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರಗಳಲ್ಲಿ ಜೋತಿ ಭತ್ತವನ್ನು ಖರೀದಿಸುವಂತೆ ಆದೇಶ ಮಾಡಿ ಭತ್ತದ ಬೆಳೆಗಾರರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಸಚಿವ ಜಗದೀಶ್ ಶೆಟ್ಟರ್ ಮನವಿಯನ್ನು ಸ್ವೀಕರಿಸಿ ಗಮನಕ್ಕೆ ತರುವುದಾಗಿ ತಿಳಿಸಿದರು.